ಸಾರಾಂಶ
ಕೊಪ್ಪಳ: ತುಂಗಭದ್ರಾ ಡ್ಯಾಮ್‌ನ ಮೇಲೆ ಪ್ರೀ ವೆಡ್ಡಿಂಗ್ ಶೂಟ್ ನಡೆಸಿದ ಫೋಟೋ ವೈರಲ್ ಆಗಿದ್ದರೂ ಸಹ ಪೊಲೀಸ್ ಇಲಾಖೆ ಜಾಣಕುರುಡತನ ಪ್ರದರ್ಶನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಫೋಟೊ ಶೂಟ್ ನಡೆದಿರುವುದು ಈಗಲ್ಲ. ಈ ಹಿಂದೆಯೇ ಆಗಿದೆ ಎಂದು ಪೊಲೀಸ್ ಇಲಾಖೆ, ತುಂಗಭದ್ರಾ ನೀರಾವರಿ ಇಲಾಖೆ ಹಾಗೂ ತುಂಗಭದ್ರಾ ಬೋರ್ಡ್ ಕೈ ಚೆಲ್ಲಿವೆ. ಫೊಟೋದಲ್ಲಿರುವ ಕಾರು, ವಿಳಾಸ ಪತ್ತೆ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಈಗಲ್ಲದಿದ್ದರೂ ಈ ಹಿಂದೆಯಾದರೂ ನಡೆದಿದ್ದು ಕಾನೂನು ಬಾಹೀರ, ಇದು ಅಕ್ಷಮ್ಯ ಅಪರಾಧ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ ಹೊರತು ಅದನ್ನು ಪತ್ತೆ ಮಾಡಿ, ಕ್ರಮಕೈಗೊಂಡು, ಮಾಹಿತಿ ನೀಡದೆ ಇರುವುದು ಮಾತ್ರ ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾಗಿದೆ.
ನೀರಾವರಿ ಇಲಾಖೆಯ ಅಧಿಕಾರಿಗಳು ಭದ್ರತಾ ಸಿಬ್ಬಂದಿ ವಿಚಾರಿಸಿದ್ದಾರೆ. ಪೊಲೀಸ್ ಇಲಾಖೆಯೂ ಸಹ ಡ್ಯಾಂ ಮೇಲೆ ಕರ್ತವ್ಯ ನಿರ್ವಹಿಸಿದವರಿಂದ ಮೌಖಿಕ ಮಾಹಿತಿ ಪಡೆದಿದೆ. ಆದರೆ, ಆಗಿರುವ ಪ್ರಮಾದದ ಕುರಿತು ಕ್ರಮವಹಿಸುವುದಕ್ಕೆ ಮುಂದಾಗದೆ ಇರುವುದು ಮಾತ್ರ ಸೋಜಿಗ ಮೂಡಿಸಿದೆ.
ಕೊಪ್ಪಳ ಪೊಲೀಸರು ಅದು ಇಲ್ಲಿ ನಡೆದಿಲ್ಲ, ಹೊಸಪೇಟೆ ಭಾಗದ ಕಡೆಗೆ ನಡೆದಿದೆ ಎಂದು ಹೇಳಿದರೆ ಹೊಸಪೇಟೆ ಪೊಲೀಸರಂತೂ ಇದಕ್ಕೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಕಟುಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಈ ಶೂಟ್ ನಡೆಸಿದವರು ಕೊಪ್ಪಳದವರೇ ಎನ್ನಲಾಗುತ್ತಿದೆ.