ಉಡುಪಿ ಜಿಲ್ಲೆಯ ಸಾಧಾರಣ ಕುಟುಂಬದಲ್ಲಿ ಜನಿಸಿದ್ದ ರಾಜೇಂದ್ರ ಶೆಟ್ಟಿ, ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯೊಂದಿಗೆ ಹುಬ್ಬಳ್ಳಿಗೆ ವಲಸೆ ಬಂದಿದ್ದರು. ಮನೆಯಲ್ಲಿನ ಬಡತನದಿಂದ ವಿದ್ಯಾಭ್ಯಾಸ ಹೆಚ್ಚು ರುಚಿಸಲಿಲ್ಲ.

ಹುಬ್ಬಳ್ಳಿ:

ಮುಂಬೈ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಹುಡುಗ, ಹತ್ತಾರು ಹೋಟೆಲ್‌ ತೆರೆದು ಯಶಸ್ವಿ ಉದ್ಯಮಿಯಾಗಿದ್ದಲ್ಲದೇ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿದ್ದಾರೆ.

ಇದು ಇಲ್ಲಿನ ಹೋಟೆಲ್‌ ಉದ್ಯಮಿ, ಲೀಲಾವತಿ ಪ್ಯಾಲೇಸ್‌ನ ರಾಜೇಂದ್ರ ವಿ. ಶೆಟ್ಟಿ ಯಶೋಗಾಥೆ. ಉಡುಪಿ ಜಿಲ್ಲೆಯ ಸಾಧಾರಣ ಕುಟುಂಬದಲ್ಲಿ ಜನಿಸಿದ್ದ ರಾಜೇಂದ್ರ ಶೆಟ್ಟಿ, ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯೊಂದಿಗೆ ಹುಬ್ಬಳ್ಳಿಗೆ ವಲಸೆ ಬಂದಿದ್ದರು. ಮನೆಯಲ್ಲಿನ ಬಡತನದಿಂದ ವಿದ್ಯಾಭ್ಯಾಸ ಹೆಚ್ಚು ರುಚಿಸಲಿಲ್ಲ. 8ನೇ ತರಗತಿ ಅನುತ್ತೀರ್ಣರಾದ ಬಳಿಕ ಕುಟುಂಬದ ಹೊರೆ ತಗ್ಗಿಸಲು ಮನೆಯವರಿಗೂ ಹೇಳದೆ ಉದ್ಯೋಗ ಅರಸಿ ಮುಂಬೈಗೆ ತೆರಳಿದ್ದರು. ಅಲ್ಲಿ ರೈಲು ನಿಲ್ದಾಣದ ಸುತ್ತಮುತ್ತ ಚಹಾಮಾರಲು ಶುರು ಮಾಡಿದರು. ಚಹಾದಂಗಡಿಯಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್ ಹೀಗೆ ಅನೇಕ ಹಂತಗಳನ್ನು ದಾಟಿದರು. ಮುಂಬೈಯಲ್ಲೇ ಬರೋಬ್ಬರಿ 20 ವರ್ಷ ಕಳೆದರು. ಅದರಲ್ಲಿ 12 ವರ್ಷ ಒಂದೇ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದರು.

ಅಲ್ಲಿಂದ ಕುಟುಂಬದ ಜವಾಬ್ದಾರಿ ಹೊರಲು ಹುಬ್ಬಳ್ಳಿಗೆ ಮರಳಿ ಬಂದ ಇವರು, ಗೆಳೆಯನೊಬ್ಬನ ₹ 50 ಸಾವಿರ ಸಹಾಯಧನದೊಂದಿಗೆ 2005ರಲ್ಲಿ ಧಾರವಾಡದ ಟೋಲ್‌ನಾಕಾ ಬಳಿ “ಶ್ರೀ ಪಂಜುರ್ಲಿ” ಎಂಬ ಮೊದಲ ಸ್ವಂತ ಹೋಟೆಲ್‌ ಆರಂಭಿಸಿದರು. ಹೀಗೆ ಸಣ್ಣ ಹೆಜ್ಜೆಯಿಂದ ಆರಂಭವಾದ ಹೋಟೆಲ್‌ ಉದ್ಯಮ ದಿನದಿಂದ ದಿನಕ್ಕೆ ದೊಡ್ಡ ಹೆಮ್ಮರವಾಗಿ ಬೆಳೆಯಿತು. ಸದ್ಯ 10ಕ್ಕೂ ಅಧಿಕ ಊಟ ಹಾಗೂ ಉಪಾಹಾರದ ಹೋಟೆಲ್‌ಗಳ ಮಾಲೀಕರಾಗಿದ್ದಾರೆ. ಒಂದು ಕಲ್ಯಾಣ ಮಂಟಪವನ್ನು ಸ್ಥಾಪಿಸಿದ ಕೀರ್ತಿ ಇವರದು. ವಿವಿಧ ಸಾಮಾಜಿಕ, ಸಾಂಸ್ಕೃತಿಕ ಶೈಕ್ಷಣಿಕ ಕ್ರೀಡಾ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.