ಕಾಂಗ್ರೆಸ್ ದೇಶದಲ್ಲಿ ನಡೆಸಲು ಹವಣಿಸಿರುವ ಅರಾಜಕತೆ ಧಿಕ್ಕರಿಸಿ, ಅವರಿಗೆ ಎಚ್ಚರಿಕೆ ಕೊಡಲು ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶವಾಗಿದೆ.

ಕುಮಟಾ: ದೇಶದ ತಾಂತ್ರಿಕತೆ, ಆರ್ಥಿಕತೆ ಹಾಗೂ ಸಂಶೋಧನಾ ಶಕ್ತಿ ಜಗತ್ತನ್ನೇ ಭಾರತದತ್ತ ಮುಖ ಮಾಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಕ್ಕೆ ನಿರುತ್ತರವಾಗಿರುವ ಕಾಂಗ್ರೆಸ್ ಅರಾಜಕತೆ ಸೃಷ್ಟಿಗೆ ಇಳಿದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದ ರೋಟರಿ ಹಾಲ್‌ನಲ್ಲಿ ಭಾನುವಾರ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಎಸ್. ವಿ. ಸಂಕನೂರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ದೇಶದಲ್ಲಿ ನಡೆಸಲು ಹವಣಿಸಿರುವ ಅರಾಜಕತೆ ಧಿಕ್ಕರಿಸಿ, ಅವರಿಗೆ ಎಚ್ಚರಿಕೆ ಕೊಡಲು ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶವಾಗಿದೆ. ಈ ಚುನಾವಣೆಯ ನೇರ ಪರಿಣಾಮ ರಾಜ್ಯದ ಮೇಲೆ ಆಗದಿದ್ದರೂ ರಾಜ್ಯ ಹಾಗೂ ದೇಶದಲ್ಲಿ ಪ್ರಸ್ತುತ ಅರಾಜಕತೆ ಸೃಷ್ಟಿಸುವಂಥ ವಿದ್ಯಮಾನಗಳಿಗೆ ಧಿಕ್ಕಾರ ಹಾಕುವಂಥ ಫಲಿತಾಂಶವನ್ನು ನಾವೆಲ್ಲ ನೀಡಬೇಕಿದೆ ಎಂದರು.

ಭಾರತದ ಜನರ ನರನಾಡಿಗಳಲ್ಲಿ ಪ್ರಜಾಪ್ರಭುತ್ವ ಇದೆ. ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಅಥವಾ ಜಿರಳೆ ಪಾರ್ಟಿಯಿಂದ ಅರಾಜಕತೆ ಇಲ್ಲಿ ಸಾಧ್ಯವಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಹುಟ್ಟಿಕೊಂಡ ಹೋರಾಟ ಅರಾಜಕತೆ ಸೃಷ್ಟಿಯತ್ತ ಹೊರಳಿದೆ. ಹೀಗಾಗಿ ಆರಂಭದಲ್ಲಿ ಅವರ ಹೋರಾಟ ಬೆಂಬಲಿಸಿದವರು ಈಗ ಅವರಿಂದ ದೂರ ಸರಿಯುತ್ತಿದ್ದಾರೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ ಅಡಕೆ ಬೆಳೆಗಾರರ ಪರವಾಗಿ ಪಾರ್ಲಿಮೆಂಟಿನಲ್ಲಿ ಧ್ವನಿಎತ್ತಿದ್ದ ಸಚಿವ ಪ್ರಹ್ಲಾದ ಜೋಶಿ ಅವರಂತೆಯೇ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಕೂಡಾ ಈ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿಯಾದವರು. ಅವರನ್ನು ೩ನೇ ಬಾರಿಗೆ ವಿಜಯಮಾಲೆ ತೊಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಭಟ್ಕಳದ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಸರಳ ವ್ಯಕ್ತಿತ್ವದ ಸಜ್ಜನರಾದ ಅಭ್ಯರ್ಥಿ ಸಂಕನೂರ ಅವರು ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿದಂಥವರು. ಹೀಗಾಗಿ ಮತ್ತೊಮ್ಮೆ ಗೆಲ್ಲಿಸೋಣ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಮಾಜಿ ಸಚಿವ ಶಿವಾನಂದ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪದಾಧಿಕಾರಿಗಳಾದ ಆರ್.ಡಿ. ಹೆಗಡೆ, ವೆಂಕಟೇಶ ನಾಯಕ, ಗೋವಿಂದ ನಾಯ್ಕ, ಎಂ.ಜಿ. ಭಟ್, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಡಾ. ಜಿ.ಜಿ. ಹೆಗಡೆ, ಗಣೇಶ ಪಂಡಿತ, ಶಿವಾನಿ ನರಸಾಣಿ ಇತರರು ಇದ್ದರು.

ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ವಂದಿಸಿದರು.