ಮಕ್ಕಳಿಗೆ ಶಿಕ್ಷಣದ ಜತೆ ಪ್ರೀತಿ, ವಿಶ್ವಾಸ, ಬಾಂಧವ್ಯದ ಬಾಳು ಕಲಿಸಿ. ಆ ಮೂಲಕ ದ್ವೇಷಮುಕ್ತ ಸಮಾಜ ನಿರ್ಮಾಣ ಮಾಡಬೇಕು.
ಅಂಜುಮನ್ ಸಂಸ್ಥೆಯವರು ಶೀಘ್ರ ಲಾ ಮತ್ತು ಮೆಡಿಕಲ್ ಕಾಲೇಜು ಆರಂಭಿಸಲಿಅದ್ಧೂರಿಯಾಗಿ ನಡೆದ ಭಟ್ಕಳ ಅಂಜುಮನ್ ಸಂಸ್ಥೆಯ 106ನೇ ವರ್ಷದ ಅಂಜುಮನ್ ಡೇ
ಕನ್ನಡಪ್ರಭ ವಾರ್ತೆ ಭಟ್ಕಳಮಕ್ಕಳಿಗೆ ಶಿಕ್ಷಣದ ಜತೆ ಪ್ರೀತಿ, ವಿಶ್ವಾಸ, ಬಾಂಧವ್ಯದ ಬಾಳು ಕಲಿಸಿ. ಆ ಮೂಲಕ ದ್ವೇಷಮುಕ್ತ ಸಮಾಜ ನಿರ್ಮಾಣ ಮಾಡಬೇಕು. ಮೊದಲು ಮನೆಯನ್ನು ದ್ವೇಷಮುಕ್ತಗೊಳಿಸಿ. ದ್ವೇಷದಿಂದ ಮನೆಯನ್ನು ಹೊರತಂದರೆ ಎಲ್ಲವೂ ಸರಿಯಾಗುತ್ತದೆ. ಮಕ್ಕಳಿಗೆ ಮಾನವೀಯತೆ ಗುಣ ಹೆಚ್ಚು ಬೆಳೆಸಿ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದರು.
ಅಂಜುಮನ್ ಕಾಲೇಜಿನಲ್ಲಿ ಶನಿವಾರ ಅಂಜುಮನ್ ಶಿಕ್ಷಣ ಸಂಸ್ಥೆ ಏರ್ಡಿಸಿದ 106ನೇ ವರ್ಷದ ಅಂಜುಮನ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬದುಕಿನಲ್ಲಿ ತಾಳ್ಮೆ ಮುಖ್ಯ, ತಾಳ್ಮೆ ಇದ್ದರೆ ಎಂತಹ ಯಶಸ್ಸೂ ಕೂಡ ನಮ್ಮದಾಗಿಸಬಹುದು. ದೇಶ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಸಂಸದರು, ಶಾಸಕರು, ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ಬಲಿಷ್ಠರಾಗುವುದಕ್ಕಿಂತ, ಯುವಜನತೆ, ವಿದ್ಯಾರ್ಥಿಗಳು ಬಲಿಷ್ಠರಾಗಬೇಕು. ಅಂದಾಗ ಮಾತ್ರ ದೇಶ ವಿಶ್ವದಲ್ಲಿ ನಂಬರ್ 1 ಸ್ಥಾನಕ್ಕೇರಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಭಟ್ಕಳದ ಮುಸ್ಲೀಮರು ವ್ಯಾಪಾರ ವಹಿವಾಟಿಗೆ ಒತ್ತು ಕೊಟ್ಟಷ್ಟೇ ತಮ್ಮ ಮಕ್ಕಳನ್ನು ಐಎಎಸ್, ಐಪಿಎಸ್, ಉತ್ತಮ ವೈದ್ಯರು ಹೀಗೆ ಸಮಾಜದ ಎಲ್ಲಾ ರಂಗಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಮಾಡಬೇಕು. ಮಕ್ಕಳನ್ನು ಕೇವಲ ವ್ಯಾಪಾರಕ್ಕಷ್ಟೇ ಸೀಮಿತಗೊಳಿಸಬಾರದು. ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ. ನಾವು ನಮ್ಮ ದೇಶದಲ್ಲಿ ಸ್ವಚ್ಛಂದವಾಗಿ ಓಡಾಟ ಮಾಡಬಹುದು. ಇಂತಹ ಪ್ರಜಾಪ್ರಭುತ್ವದ ವ್ಯವಸ್ಥೆ ಪ್ರಪಂಚದ ಬೇರೆ ಯಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು. ಭಟ್ಕಳ ಅಂಜುಮನ್ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಉತ್ತಮ ವಾತಾವರಣ, ಜಾಗ ಇರುವ ಸಂಸ್ಥೆ ಆದಷ್ಟು ಬೇಗ ಕಾನೂನು ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು. ಆ ಮೂಲಕ ಭಟ್ಕಳವನ್ನು ಮಣಿಪಾಲ್ ನಂತೆ ಅಭಿವೃದ್ಧಿ ಮಾಡಬೇಕು ಎಂದ ಅವರು, ಕಾನೂನು ಮತ್ತು ಮೆಡಿಕಲ್ ಕಾಲೇಜು ಆದರೆ ಸ್ಥಳೀಯವಾಗಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಭಟ್ಕಳ ಪಟ್ಟಣದ ಹೆಚ್ಚಿನ ಅಭಿವೃದ್ಧಿ ಕಾಣುತ್ತದೆ. ಅದೂ ಅಲ್ಲದೇ ಯುವ ಜನತೆ ಕಾನೂನು ಮತ್ತು ವೈದ್ಯಕೀಯ ಶಿಕ್ಷಣ ಪಡೆಯಲು ಬೇರೆ ಕಡೆಗೆ ಹೋಗುವ ಪರಿಸ್ಥಿತಿ ಬರುವುದಿಲ್ಲ. ಹೀಗಾಗಿ ಅಂಜುಮನ್ ಆಡಳಿತ ಮಂಡಳಿ ಇವರೆಡನ್ನೂ ಆದಷ್ಟು ಬೇಗ ಮಾಡಬೇಕು. ಸರಕಾರದಿಂದ ಇದಕ್ಕೆ ಬೇಕಾದ ಸಹಾಯ ಸಹಕಾರ ಮಾಡುವುದಾಗಿ ಅವರು ಭರವಸೆ ನೀಡಿದರು.ಇನ್ನೋರ್ವ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಭಟ್ಕಳ ಅಂಜುಮನ್ ಸಂಸ್ಥೆ 106 ವರ್ಷ ಪೂರೈಸಿದ್ದು, ಉತ್ತಮ ಶಿಕ್ಷಣ ನೀಡುತ್ತಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಜಾಗ ಹೊಂದಿರುವ ಅಂಜುಮನ್ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದ್ದು, ಇಂತಹ ಸಂಸ್ಥೆಗೆ ಕಾನೂನು ಮತ್ತು ಮೆಡಿಕಲ್ ಕಾಲೇಜು ಮಾಡುವುದು ಕಷ್ಟದಾಯಕವಲ್ಲ. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿದ್ದು, ಆದಷ್ಟು ಬೇಗ ಮೆಡಿಕಲ್ ಕಾಲೇಜು ಮಾಡಿದರೆ ಎಲ್ಲಾ ರೀತಿಯ ಸಹಾಯ ಸಹಕಾರ ಮಾಡುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಂ. ಖಾನ್, ಶಿರೂರು ಗ್ರೀನ್ ವ್ಯಾಲಿ ಶಾಲೆಯ ಅಧ್ಯಕ್ಷ ಮೊಹ್ಮದ್ ಮೀರಾ ಮೀರಾನ್, ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುನೂಸ್ ಕಾಝೀಯಾ ಮಾತನಾಡಿದರು. ಉಪಾಧ್ಯಕ್ಷ ಸಾಧಿಕ್ ಫಿಲ್ಲೂರು ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಶಾಕ್ ಶಾಬಂದ್ರಿ ಪ್ರಾಸ್ತಾವಿಕ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.