ಮಕ್ಕಳಿಗೆ ಸಂಸ್ಕೃತಿಯ ಮೌಲ್ಯಗಳನ್ನು ಕಲಿಸಿ

| Published : May 23 2024, 01:06 AM IST

ಸಾರಾಂಶ

ಪೋಷಕರು ಮಕ್ಕಳಿಗೆ ಏನು ಕೊಡಲಾಗದಿದ್ದರೂ ಕನಿಷ್ಠ ಕೌಟುಂಬಿಕ ಸಂಬಂಧಗಳ ಮಹತ್ವವನ್ನಾದರೂ ಅವರಿಗೆ ದಕ್ಕುವಂತೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಂದೆತಾಯಿಗಳು ವಯಸ್ಸಾದಾಗ ಅನಾಥಾಶ್ರಮ, ವೃದ್ಧಾಶ್ರಮದ ಪಾಲಾಗುವುದು ಖಚಿತ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಧುನಿಕ ಶಿಕ್ಷಣ ಮತ್ತು ಅಥವಿಲ್ಲದ ಬದುಕು ಮಕ್ಕಳನ್ನು ಪೋಷಕರಿಂದ ದೂರವಿರುವಂತೆ ಏಕಾಂಗಿಯಾಗಿ ಬದುಕುವಂತೆ, ಮಾನವೀಯ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮಾಡುತ್ತಿದೆ ಎನ್ನುವ ಎಚ್ಚರ ಎಲ್ಲ ಪೋಷಕರಿಗೂ ಇರಬೇಕು ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ್. ಜಿ. ಕಪ್ಪಣ್ಣ ಹೇಳಿದರು.

ನಗರದ ವಾಪಸಂದ್ರ ಬಡಾವಣೆಯ ಜಚನಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸಕಲ ರಂಗಹೆಜ್ಜೆ ಟ್ರಸ್ಟ್ ಏರ್ಪಡಿಸಿದ್ದ ‘ವಸಂತ ಚಿಟ್ಟೆಗಳು’ 3ನೇ ವರ್ಷದ ಮಕ್ಕಳ ಸಾಂಸ್ಕೃತಿಕ ರಂಗ ಹಬ್ಬ2024ರ ಸಮಾರೋಪದಲ್ಲಿ ಅವರು ಮಾತನಾಡಿದರು.

ಕೌಟುಂಬಿಕ ಸಂಬಂಧ

ಪೋಷಕರು ಮಕ್ಕಳಿಗೆ ಏನು ಕೊಡಲಾಗದಿದ್ದರೂ ಕನಿಷ್ಠ ಕೌಟುಂಬಿಕ ಸಂಬಂಧಗಳ ಮಹತ್ವವನ್ನಾದರೂ ಅವರಿಗೆ ದಕ್ಕುವಂತೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಂದೆತಾಯಿಗಳು ವಯಸ್ಸಾದಾಗ ಅನಾಥಾಶ್ರಮ, ವೃದ್ಧಾಶ್ರಮದ ಪಾಲಾಗುವುದು ಖಚಿತ. ಅವರು ಸತ್ತಾಗ ಸಂಸ್ಕಾರ ಮಾಡಬೇಕಾದ ಮಕ್ಕಳು ಬಾರದೆ ದೂರದ ದೇಶದಿಂದಲೇ ಮೊಬೈಲ್‌ನಲ್ಲಿ ನೋಡಿ ಅಶ್ರು ತರ್ಪಣ ಸಲ್ಲಿಸುವುದು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು. ಸಂಜೆ ಸರ್ ಎಂ ವಿ ಕ್ರೀಡಾಂಗಣದ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆದ ಮಕ್ಕಳ ನಾಟಕದಲ್ಲಿ ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ವೆಂಕಟಾಚಲಯ್ಯ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಕ್ಕಳ ನಾಟಕ ಕಾರ್ಯಕ್ರಮ ಉದ್ಘಾಟಿಸಿದರು.

ಮಕ್ಕಳಿಂದ ನಾಟಕ ಪ್ರದರ್ಶನ

ಕಳದೆ 28 ದಿನಗಳ ಕಾಲ ಬೇಸಿಗೆ ಶಿಬಿರದಲ್ಲಿ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಕಲಿತು ಕಡಿಮೆ ದಿನಗಳಲ್ಲೆ ಅತ್ತುತ್ತಮ ನಾಟಕ ಪ್ರದರ್ಶಿಸಿದ ಮಕ್ಕಳ ಕಲಾಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಮಕ್ಕಳಿಂದ ನಾಟಕ, ಕಂಸಾಳೆ ನೃತ್ಯ,ಪಟದ ಕುಣಿತ,ತಮಟೆ ನೃತ್ಯಗಳು, ಶಿಬಿರದ ಮಕ್ಕಳಿಂದ ಹಕ್ಕಿಹಾಡು ಮತ್ತು ಅಳಿಲು ರಾಮಾಯಣ ನಾಟಕವನ್ನು "ಸಕಲರಂಗ ಹೆಜ್ಜೆ ಟ್ರಸ್ಟ್ " ಅಧ್ಯಕ್ಷರಾದ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನವಾಯಿತು. ಕಾರ್ಯಕ್ರಮದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ಸಕಲ ರಂಗಹೆಜ್ಜೆ ಟ್ರಸ್ಟ್ ಅಧ್ಯಕ್ಷ ದಿಲೀಪ್ ಕುಮಾರ್, ಕಾರ್ಯದರ್ಶಿ ಯಶ್ವಂತ್, ತತ್ವಪದ ಗಾಯಕಿ ಲೀಲಾ ಲಕ್ಮೀ ನಾರಾಯಣ್, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಬೊಮ್ಮನಹಳ್ಳಿ ವೇಣು ಮತ್ತಿತರರು ಇದ್ದರು.