ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿ: ಕೋನರಡ್ಡಿ

| Published : May 15 2025, 01:51 AM IST

ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಿ: ಕೋನರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಹಣ, ಆಸ್ತಿ, ಬಂಗಾರ ಗಳಿಕೆ ಮಾಡಿ ಶ್ರೀಮಂತರಾಗುವುದಕ್ಕಿಂತ ಬಂಧು, ಬಾಂಧವರ ಜತೆಗಿನ ಸಂಬಂಧವನ್ನು ಉಳಿಸಿಕೊಂಡು ಹೋಗುವುದೇ ನಿಜವಾದ ಶ್ರೀಮಂತಿಕೆ

ನವಲಗುಂದ: ಮಕ್ಕಳಲ್ಲಿ ವಿದ್ಯಾಭ್ಯಾಸದ ಜತೆಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಸಂಸ್ಕೃತಿ, ಸಂಸ್ಕಾರವು ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ತಾಲೂಕಿನ ಖನ್ನೂರ ಗ್ರಾಮದ ಬನಶಂಕರಿ ಸೇವಾ ಸಮಿತಿ ಆಶ್ರಯದಲ್ಲಿ ಜರುಗಿದ ಶ್ರೀ ಬನಶಂಕರಿ ದೇವಿ ಜಾತ್ರಾಮಹೋತ್ಸವ, ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ ಹಾಗೂ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಮಾತನಾಡಿ, ನಾವು ಹುಟ್ಟಿದ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಅದನ್ನು ಮರೆತ ಜೀವನ ಜೀವನವೇ ಅಲ್ಲ. ಜೀವನದಲ್ಲಿ ಹಣ, ಆಸ್ತಿ, ಬಂಗಾರ ಗಳಿಕೆ ಮಾಡಿ ಶ್ರೀಮಂತರಾಗುವುದಕ್ಕಿಂತ ಬಂಧು, ಬಾಂಧವರ ಜತೆಗಿನ ಸಂಬಂಧವನ್ನು ಉಳಿಸಿಕೊಂಡು ಹೋಗುವುದೇ ನಿಜವಾದ ಶ್ರೀಮಂತಿಕೆ ಎಂದರು.

ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಹುಬ್ಬಳ್ಳಿ ಗ್ರಾಮೀಣ ತಾಲೂಕು ತಹಸೀಲ್ದಾರ್ ಜಂಬುನಾಥ ಮಜ್ಜಗಿ ಅವರನ್ನು ಖನ್ನೂರ ಗ್ರಾಮದ ಬನಶಂಕರಿ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಜ್ಜಗಿ, ನನ್ನೂರು ನನ್ನ ಹೆಮ್ಮೆ, ಇಲ್ಲಿನ ಪರಿಸರ, ಸ್ನೇಹ ಇಂದಿಗೂ ಹಚ್ಚ ಹಸಿರಾಗಿದೆ. ತಾವು ಪ್ರಾಥಮಿಕ ಶಿಕ್ಷಣ ಪೂರೈಸಿದ ಶಾಲೆಯ ದತ್ತಿ ನಿಧಿಗೆ ₹1 ಲಕ್ಷ ನೀಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಗ್ರಾಮದ ಮಕ್ಕಳನ್ನು ಸನ್ಮಾನಿಸಲಾಯಿತು.

ಶಲವಡಿ ವಿರಕ್ತಮಠದ ಗುರುಶಾಂತೇಶ್ವರ ಶ್ರೀಗಳು, ನಿವೃತ್ತ ಮುಖ್ಯೋಪಾಧ್ಯಾಯ ಸಿ.ವಿ. ಹೂಗಾರ, ಅರುಣ ಮಜ್ಜಗಿ, ಶೇಖಣ್ಣ ಕಡ್ಲಿ, ಅಜ್ಜನಗೌಡ ಹಿರೇಗೌಡರ, ಗ್ರಾಪಂ ಅಧ್ಯಕ್ಷ ರಾಜೀವಗೌಡ ಗೌಡಪ್ಪಗೌಡರ, ಶಂಕ್ರಪ್ಪ ಬೆಟಗೇರಿ, ಮಾಲತೇಶ ಗೌಡ ಮುದಿಗೌಡರ, ಶಂಕ್ರಗೌಡ ಪಾಟೀಲ, ಶಿವಪ್ಪ ಕಡ್ಲಿ, ಮಂಜುನಾಥ ಹೂಗಾರ, ಪ್ರಮೋದ ಬೇಟಗೇರಿ, ಹನಮಂತ ಪೂಜಾರ ಮತ್ತಿತರರು ಇದ್ದರು.