ಜೀವನ ಮತ್ತು ಸಮಯ ವಿಶ್ವದ ಬಹುದೊಡ್ಡ ಶಿಕ್ಷಕರಾಗಿದ್ದು, ನೂತನ ಶಿಕ್ಷಕ ಮಿತ್ರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನದಲ್ಲಿ ಎಂದೂ ದಾರಿ ತಪ್ಪದೆ ಸಮಯವನ್ನು ಸದುಪಯೋಗಪಡಿಸಿಕೊಂಡು ತಾವು ಅಭಿವೃದ್ಧಿ ಹೊಂದುವ ಜೊತೆಗೆ ಮುಂದಿನ ತಲೆಮಾರಿನ ಮಕ್ಕಳನ್ನು ಸರಿದಾರಿ ತೋರುವ ಜವಾಬ್ದಾರಿ ನಿಮ್ಮ ಮೇಲಿದೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಜ್ಞಾನದ ಜೊತೆಗೆ ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಕಲಿಸಿಕೊಡಬೇಕು ಎಂದು ಎಇಟಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷೆ ಶಾರದ ರಮೇಶ ರಾಜು ಹೇಳಿದರು.

ನಗರದ ಎಇಟಿ ಮಹಾಶಿಕ್ಷಣ ವಿದ್ಯಾಲಯದ ಕೆಂಪಮ್ಮ ಜೆ.ದೇವಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಜೀವನ ನೀಡಿದರೆ, ಶಿಕ್ಷಕರು ಆ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಅವರ ಜೀವನವನ್ನು ರೂಪಿಸಿ, ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತೆ ದಾರಿ ತೋರುವ ರೂವಾರಿಗಳು ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ ವೃತ್ತಿ ತರಬೇತಿ ಪಡೆದು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ಭವಿಷ್ಯದ ಶಿಕ್ಷಕರುಗಳಿಗೆ ಶುಭ ಕೋರಿದ ಅವರು, ತಾವು ಎಂದಿಗೂ ತಮಗೆ ಜೀವ ನೀಡಿದ ತಂದೆ ತಾಯಿಗಳಿಗೆ ಕೃತಜ್ಞತೆಯಿಂದ ಇರುವ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು. ಜೀವನ ಮತ್ತು ಸಮಯ ವಿಶ್ವದ ಬಹುದೊಡ್ಡ ಶಿಕ್ಷಕರಾಗಿದ್ದು, ನೂತನ ಶಿಕ್ಷಕ ಮಿತ್ರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನದಲ್ಲಿ ಎಂದೂ ದಾರಿ ತಪ್ಪದೆ ಸಮಯವನ್ನು ಸದುಪಯೋಗಪಡಿಸಿಕೊಂಡು ತಾವು ಅಭಿವೃದ್ಧಿ ಹೊಂದುವ ಜೊತೆಗೆ ಮುಂದಿನ ತಲೆಮಾರಿನ ಮಕ್ಕಳನ್ನು ಸರಿದಾರಿ ತೋರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಎಚ್.ಪಿ.ಧರ್ಮೇಶ್, ಮೋಹನ್‌ದಾಸ್, ಸುಕೇಶ್ ದಯಾನಂದ್, ರಕ್ಷಿತಾ, ಶ್ರೀದೇವಿ, ಶಿವ ನಾಗೇಂದ್ರ ಪ್ರಸಾದ್, ವಾಣಿ ಸೇರಿದಂತೆ ಇತರರು ಹಾಜರಿದ್ದರು.