ಸಾರಾಂಶ
ಗದಗ: ಭಾರತ ದೇಶಕ್ಕೆ ಇರುವ ಭವಿಷ್ಯ ಬೇರೆ ಯಾವುದೇ ದೇಶಕ್ಕೂ ಇಲ್ಲ.ಈ ದೇಶದ ಶೇ. 42 ರಷ್ಟು ಯುವಕರಿದ್ದಾರೆ.ನಾವು ಮುಂದಿನ ಜನಾಂಗಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ಕೆಲಸ ಮಾಡಬೇಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆದ ಬಾಹೇಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ದೇಶದಲ್ಲಿ ಧರ್ಮ ಗುರುಗಳು, ಭಕ್ತಿ, ಸಂಸ್ಕಾರ, ಸಂಸ್ಕೃತಿ ಉಳಿದಿದ್ದರೆ ಗಾಮೀಣ ಪ್ರದೇಶದಲ್ಲಿ. ಅದು ನಮ್ಮ ತಾಯಂದಿರಿಂದ ಉಳಿದಿದೆ. ಒಂದು ಕಾಲದಲ್ಲಿ ನಾವು ರಂಭಾಪುರಿ ಪೀಠಕ್ಕೆ ಹೋಗಿ ದರ್ಶನ ಪಡೆಯಬೇಕಿತ್ತು. ಈಗ ಪೀಠವೇ ಜನರ ಬಳಿಗೆ ಬರುವಂತಾಗಲು ಇವತ್ತಿನ ಜಗದ್ಗುರುಗಳು ಕಾರಣ. ಎಲ್ಲಿ ಭಕ್ತಿ ಇದೆ ಅಲ್ಲಿ ಶಕ್ತಿ ಇದೆ. ಭಕ್ತಿ ಎಂದರೆ ಉತ್ಕೃಷ್ಟವಾಗಿರುವ ಪ್ರೀತಿ, ಶುದ್ಧವಾಗಿರುವಂತ ಪ್ರೀತಿ ಉತ್ಕೃಷ್ಟವಾಗಿರುವಂತದ್ದು, ಗುರುಗಳಲ್ಲಿ ಆ ಉತ್ಕೃಷ್ಟ ಪೀತಿ ವ್ಯಕ್ತವಾಗುತ್ತದೆ ಎಂದರು.
ಭಕ್ತರು ಗುರುವಿನಲ್ಲಿ ಲೀನವಾಗಿ ಒಂದಾಗಿ ಕರಗಿದಾಗ ಗುರುವಿನ ಆಶೀರ್ವಾದ ಸಿಗುತ್ತದೆ. ಇದು ಶುದ್ಧ ಅಂತಕರಣದ ಸಂಬಂಧ. ಗುರು ಮತ್ತು ಭಕ್ತರ ಸಂಬಂಧ ಕೇವಲ ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ ಎಂದರು.ಭೂ ತಾಯಿಗೆ ಒಂದು ಕಾಳು ಹಾಕಿದರೆ ಸಾವಿರ ಕಾಳು ಕೊಡುತ್ತಾಳೆ, ಭೂ ತಾಯಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಒಂದು ಇಂಚು ಫಲವತ್ತಾದ ಮಣ್ಣು ಬರಬೇಕೆಂದರೆ ಐದು ನೂರು ವರ್ಷ ಬೇಕೆಂದು ವಿಜ್ಞಾನಿಗಳು ಹೇಳುತ್ತಾರೆ. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 35 ಕೋಟಿ ಇತ್ತು. ಆಗ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ನೂರ ಮೂವತ್ತೈದು ಕೋಟಿ ಜನಸಂಖ್ಯೆ ಆಗಿದೆ. ಆದರೆ, ನಮ್ಮ ದೇಶದಲ್ಲಿಯೇ ಆಹಾರ ಉತ್ಪಾದನೆ ಮಾಡುತ್ತೇವೆ. ರೈತ ಕೇಂದ್ರಿತ ಕೃಷಿ ನೀತಿ ಜಾರಿಗೆ ಬರಬೇಕು ಎಂದರು.
ಪೂಜ್ಯರು ಅಬ್ಬಿಗೇರಿಯಲ್ಲಿ ನವರಾತಿ ಧರ್ಮ ಸಮ್ಮೇಳನ ಮಾಡುತ್ತಿದ್ದು, ಅವರು ಕಾಲಿಡುವ ಭೂಮಿ ಫಲವತ್ತಾಗುತ್ತದೆ. ಅಬ್ಬಿಗೇರಿ ಸಮೃದ್ಧವಾಗಲಿ. ನಾನು ಅಧಿಕಾರದಲ್ಲಿದ್ದಾಗ ಗುರುಗಳು ರೇಣುಕಾಚಾರ್ಯರ ಜಯಂತಿ ಮಾಡಬೇಕೆಂದು ಸೂಚನೆ ನೀಡಿದರು. ನಾನು ತಕ್ಷಣ ಆದೇಶ ಮಾಡಿದೆ. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಮನುಷ್ಯನಿಂದ ಮಾನವನಾಗಬೇಕೆಂದರೆ ಸಂಸ್ಕಾರ ಮುಖ್ಯ ಆ ಸಂಸ್ಕಾರ ರಂಭಾಪುರಿ ಪೀಠದಿಂದ ದೊರೆಯುತ್ತಿದೆ. ಸದಾ ಸಮಾಜದ ಒಳಿತಿಗಾಗಿ ಗುರುಗಳು ಚಿಂತನೆ ಮಾಡುತ್ತಾರೆ ಎಂದು ತಿಳಿಸಿದರು.ಹೋರಾಟ ಅಗತ್ಯ:
ಈ ಭಾಗದಲ್ಲಿ ಗದಗ ವಾಡಿ ರೈಲು ರೋಣ ತಾಲೂಕಿನಲ್ಲಿ ಹಾದು ಹೋಗಬೇಕಿದೆ. ನಮ್ಮ ಮಿತ್ರರೆ ರಾಜಕಾರಣ ಮಾಡಿದ್ದರಿಂದ ರೋಣ ಕೈ ತಪ್ಪಿದೆ. ಈಗ ಮತ್ತೆ ಅದನ್ನು ಪಡೆಯಲು ಹೋರಾಟ ಮಾಡಬೇಕಿದೆ ಆ ಹೋರಾಟದಲ್ಲಿ ನಾವು ಯಶಸ್ವಿಯಾಗುವ ವಿಶ್ವಾಸ ಇದೆ.ಇದಲ್ಲದೇ ಆರ್‌ಒಬಿ, ಆರ್‌ಯುಬಿ ರಸ್ತೆ ಮಾಡುವ ಕೆಲಸಗಳಿವೆ. ಅವುಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.ಈ ವೇಳೆ ರಂಭಾಪುರಿ ಪೀಠದ ಪೀಠಾಧ್ಯಕ್ಷ ಶ್ರೀ ವೀರಸಿಂಹಾಸನ ಭಗವತ್ಪಾದರು, ಶಾಸಕರಾದ ಜಿ.ಎಸ್.ಪಾಟೀಲ, ಡಾ. ಚಂದ್ರು ಲಮಾಣಿ, ಶರಣು ಸಲಗಾರ, ವಿಪ ಸದಸ್ಯ ಎಸ್.ವಿ. ಸಂಕನೂರು ಹಾಗೂ ಅನೇಕ ಮಠಾಧೀಶರು ಇದ್ದರು.