ಸಾರಾಂಶ
ಕನ್ನಡಪ್ರಭ ವಾರ್ತೆ ತಾಂಬಾ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಪಾಠ ಕಲಿಸಬೇಕು. ಇದು ಅವರ ಭವಿಷ್ಯದ ಬದುಕನ್ನು ರೂಪಿದಂತಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಗ್ರಾಮದ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಾಜಣ್ಣ ಮಸಳಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ೮ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ಕಟ್ಟುವುದು ಸವಾಲಿನ ಕೆಲಸವಾಗಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿ ಭವಿಷ್ಯ ರೂಪಿಸುತ್ತಿರುವ ಈ ಶಾಲೆ ಉತ್ತರೋತ್ತರವಾಗಿ ಉನ್ನತಿಯತ್ತ ಸಾಗಲಿ ಎಂದು ಆಶಿಸಿದರು. ಈ ಶಾಲೆಗೆ ಶಾಸಕರ ಅನುದಾನದಲ್ಲಿ ₹೧೦ ಲಕ್ಷ ಕೊಡುವುದಾಗಿ ಭರವಸೆ ನೀಡಿದರು.
ಡಾ.ಶಿವಕುಮಾರ ಕತ್ತಿ ಮಾತನಾಡಿ, ವಿದ್ಯಾರ್ಥಿಗಳ ಗುರಿ ಗಟ್ಟಿಯಾಗಿರಬೇಕು. ಮನಸಿಟ್ಟು ಓದಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿ ಜೀವನ ಬಂಗಾರ ವಿದ್ದಂತೆ. ಅದನ್ನು ಕಳೆದುಕೊಳ್ಳಬೇಡಿ. ಶಿಕ್ಷಣವೇ ಬೇರೆ, ಜೀವನವೇ ಬೇರೆ. ಶಿಕ್ಷಣದ ಜೊತೆಗೆ ಬದುಕುವ ಕಲೆಯನ್ನು ಕಲಿಯಬೇಕು. ಶಿಕ್ಷಕರು ಮಕ್ಕಳಿಗೆ ಸಂಸ್ಕೃತಿ ಕಲಿಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆ ಹೊರಗೆ ಬರಬೇಕು ಎಂದರು.ಸಂಸ್ಥೆ ಅಧ್ಯಕ್ಷ ಜಿ.ಎಂ. ಗುಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷರಾದ ಆಸ್ಮಾ ರಜಾಕಸಾಬ ಚಿಕ್ಕಗಸಿ, ಕಾಂಗ್ರೆಸ್ ಮುಖಂಡ ಅಪ್ಪಣ್ಣ ಕಲ್ಲೂರ, ಪ್ರಕಾಶ ಮುಂಜಿ, ಉಮೇಶ ನಾಟೀಕಾರ, ಡಾ.ನವೀನ ರೂಗಿ, ಡಾ.ವಿಶಾಲ ನಿಂಬಾಳ, ಡಾ.ವಿಜಯಕುಮಾರ ಈಶ್ವರಪ್ಪಗೋಳ, ಡಾ.ಅಮರನಾಥ ಅಲೇಗಾವಿ, ಡಾ.ಎಂ.ಎಂ.ಸಾಲಿ, ಆರ್.ಎಸ್.ಖವೇಕರ, ಡಾ.ಅರವಿಂದ ಮೇತ್ರಿ, ಡಾ.ಪ್ರಜ್ವಲಾ ಶಹಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.