ಟಿವಿ ಮತ್ತು ಮೊಬೈಲ್ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳು ಇವುಗಳ ದಾಸರಾಗದಂತೆ ನೋಡಿಕೊಂಡು ಅವರಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ, ದೇಶಭಕ್ತಿ, ಸಂಸ್ಕಾರವನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ ಶೆಟ್ಟರಮಠದ ಮರಳಸಿದ್ಧ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಅಥಣಿ
ಟಿವಿ ಮತ್ತು ಮೊಬೈಲ್ ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳು ಇವುಗಳ ದಾಸರಾಗದಂತೆ ನೋಡಿಕೊಂಡು ಅವರಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ, ದೇಶಭಕ್ತಿ, ಸಂಸ್ಕಾರವನ್ನು ಕಲಿಸುವುದು ಇಂದಿನ ಅಗತ್ಯವಾಗಿದೆ ಶೆಟ್ಟರಮಠದ ಮರಳಸಿದ್ಧ ಸ್ವಾಮೀಜಿ ನುಡಿದರು.ಪಟ್ಟಣದ ಕನಕ ನಗರದಲ್ಲಿರುವ ಶ್ರೀ ಶಾರದಾ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನವೋದಯ ಹಿರಿಯ ಪ್ರಾಥಮಿಕ ಶಾಲೆಯ 15ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂತ್ರಜ್ಞಾನ ಬೆಳೆದಂತೆ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಮಾತನಾಡಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೆ ಎದುರಿಸಬೇಕು. ಕಲಿತ ಶಾಲೆಗೆ ಮತ್ತು ಪಾಲಕರಿಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.ಶಿಕ್ಷಕ ಅಣ್ಣಪ್ಪ ಸನದಿ ಮಾತನಾಡಿ, ಸಾಧನೆ ಎಂಬುದು ಸುಲಭವಾಗಿ ಬರುವುದಲ್ಲ. ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನಬೇಕು. ವಿದ್ಯಾರ್ಥಿಗಳು ಕಠಿಣ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದು ಪುಸ್ತಕದ ಜ್ಞಾನವನ್ನು ಮಸ್ತಕಕ್ಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಲೆಕ್ಕಪರಿಶೋಧಕ ಶ್ರೀನಿವಾಸ್ ಸಾವಡಕರ, ಚೇತನ ಸಬಸನ್ನವರ ಅವರನ್ನು ಸನ್ಮಾನಿಸಲಾಯಿತು. 2024- 25ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ.96 ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಕು. ರಾಜತಾ ಭರತೇಶ ರೆಂಟಿಗೆ ವಿಶೇಷ ಗೌರವ ಪ್ರತಿಭಾ ಪುರಸ್ಕಾರ ಹಾಗೂ ಯುವ ಮುಖಂಡ ಚಿದಾನಂದ ಸವದಿ ತಮ್ಮ ಅಜ್ಜ ಸಂಗಪ್ಪ ಸವದಿ ಅವರ ಸ್ಮರಣಾರ್ಥ ಕಳೆದ ವರ್ಷ ಘೋಷಿಸಿದ ₹25 ಸಾವಿರ ಪ್ರೋತ್ಸಾಹಧನ ಚೆಕ್ ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಮುತ್ತಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ವಿದ್ಯಾವತಿ ಎಂ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಅಧಿಕಾರಿ ಬಿ ಎಸ್ ನಿಕ್ಕಮ, ಮುಖ್ಯೋಪಾಧ್ಯಾಯ ಬಿ.ಐ.ಮೋದಿ ಮತ್ತು ಸುಧಾ ಕುಂಬಾರ, ಶಿಕ್ಷಕರಾದ ನಾಗರತ್ನ ಹರಿಕಾಂತ, ಎಸ್.ಕೆ.ಸನದಿ, ಶಿವಶಂಕರ ಬಡಿಗೇರ, ಚನ್ನಪ್ಪ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಂತರ ಶಾಲೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರನ್ನು ರಂಜಿಸಿದವು. ಎಂ. ಎ. ಬಡಿಗೇರ ಸ್ವಾಗತಿಸಿದರು. ಜ್ಯೋತಿ ಹೂಟಿ ನಿರೂಪಿಸಿದರು. ಪ್ರಿಯಾಂಕಾ ಕೋಳಿ ವಂದಿಸಿದರು.