ಮಹಿಳೆಯರ ಅವಮಾನಿಸಿದ ಕುಮಾರಸ್ವಾಮಿ ಬೆಂಬಲಿತ ಪಕ್ಷಕ್ಕೆ ಪಾಠ ಕಲಿಸಿ: ಡಿಕೆಶಿ

| Published : Apr 15 2024, 01:19 AM IST / Updated: Apr 15 2024, 01:20 AM IST

ಮಹಿಳೆಯರ ಅವಮಾನಿಸಿದ ಕುಮಾರಸ್ವಾಮಿ ಬೆಂಬಲಿತ ಪಕ್ಷಕ್ಕೆ ಪಾಠ ಕಲಿಸಿ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯಲ್ಲಿ ಭಾನುವಾರ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಡಿನ ತಾಯಿ ಚಾಮುಂಡೇಶ್ವರಿ, ತಾಯಿ ಕಾವೇರಿ ಪೂಜಿಸಲ್ಪಡುತ್ತಿದ್ದಾರೆ. ಹೀಗಿರುವಾಗ ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್ ನ ಕುಮಾರಸ್ವಾಮಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಟೀಕಿಸಿದ್ದಾರೆ ಎಂದು ಬೊಟ್ಟು ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಂಗ್ರೆಸ್‌ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಮಾನವ ಕುಲಕ್ಕೇ ಅವಮಾನ. ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿ ಹಾಗೂ ಬೆಂಬಲಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ನಗರದಲ್ಲಿ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳನ್ನು ಭೂಮಿ ತಾಯಿ ಎಂದು ಕರೆಯುತ್ತೇವೆ. ಹೀಗಾಗಿ ಆ ಹೆಣ್ಣಿಗೆ ಗೌರವ ಕೊಡಬೇಕೆಂದು ಇಂದಿರಾಗಾಂಧಿ ಹೇಳುತ್ತಿದ್ದರು. ದೇಶದಲ್ಲಿ ಜಾತಿ ಸಮಸ್ಯೆ ಎದುರಿಸುವುದೇ ಬಹಳ ದೊಡ್ಡ ಸವಾಲು ಎಂದು ಇಂದಿರಾಗಾಂಧಿ ಹೇಳಿದ್ದರು ಎಂದು ನೆನಪಿಸಿದರು.

ನಾಡಿನ ತಾಯಿ ಚಾಮುಂಡೇಶ್ವರಿ, ತಾಯಿ ಕಾವೇರಿ ಪೂಜಿಸಲ್ಪಡುತ್ತಿದ್ದಾರೆ. ಹೀಗಿರುವಾಗ ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್ ನ ಕುಮಾರಸ್ವಾಮಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಟೀಕಿಸಿದ್ದಾರೆ ಎಂದು ಬೊಟ್ಟು ಮಾಡಿದರು.

ತಾಯಂದಿರ ಮನೆ ಬೆಳಗಬೇಕು ಎಂಬುದೇ ಕಾಂಗ್ರೆಸ್ ಗುರಿಯಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಸೂಕ್ತ ಗೌರವ ನೀಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಕಾಂಗ್ರೆಸ್ ಶಕ್ತಿ ತುಂಬುವ ಕೆಲಸ ಮಾಡಿದೆ. ಇಂಥ ಯೋಜನೆ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ. ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಮಾನವ ಕುಲಕ್ಕೇ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ಭೂಮಿಯಲ್ಲಿ ನಿಂತು ನಾನು ಕೇಳುತ್ತಿದ್ದೇನೆ, ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿರುವ ಸಂದರ್ಭ ಪ್ರಧಾನಿ ಮೋದಿಯನ್ನು ಪ್ರಶ್ನಿಸುತ್ತಿದ್ದೇನೆ. ಮಹಿಳೆಯರಿಗೆ ಅಗೌರವ ಉಂಟು ಮಾಡುವ ಕುಮಾರಸ್ವಾಮಿಯಂಥ ರಾಜಕಾರಣಿಯನ್ನು ಮೈತ್ರಿ ಪಕ್ಷದಲ್ಲಿ ಇಟ್ಟುಕೊಳ್ಳಲು ಬಯಸುತ್ತೀರಾ ಮೋದಿಯವರೇ ಎಂದು ಪ್ರಶ್ನಿಸಿದರು.

ಬದುಕನ್ನು ಬದಲಾಯಿಸಲು ಕಾಂಗ್ರೆಸ್ ಶಕ್ತವಾಗಿದೆ - 1.20 ಕೋಟಿ ಕುಟುಂಬದವರಿಗೆ ಗ್ಯಾರಂಟಿ ಯೋಜನೆ ಸಿಕ್ಕಿದೆ. ಇವರೆಲ್ಲಾ ದಾರಿ ತಪ್ಪುತ್ತಿದ್ದಾರೆಯೇ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ರಾಜಕೀಯ ಬದ್ದತೆ ಮೆರೆದಿದ್ದೇವೆ ಎಂದರು.

ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಕವನ ವಾಚಿಸಿದ ಶಿವಕುಮಾರ್, ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯ. ಕಾಂಗ್ರೆಸ್ ಜನತೆಯ ಯೋಗಕ್ಷೇಮವನ್ನು ಸಮರ್ಥವಾಗಿ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.