ಸಾರಾಂಶ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕದಾಸ ಜಯಂತಿ
ಕನ್ನಡಪ್ರಭ ವಾರ್ತೆ ಸಕಲೇಶಪುರಮಹಾತ್ಮರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಲು ಪೋಷಕರು ಮುಂದಾದಲ್ಲಿ ಮಾತ್ರ ಉತ್ತಮ ವ್ಯಕ್ತಿಗಳ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನಕದಾಸ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ, ಮೇಲು, ಕೀಳೆಂದು ನಲುಗುತ್ತಿದ್ದ ಸಮಾಜದಲ್ಲಿ ಕೀರ್ತನೆಗಳ ಮುಖಾಂತರ ಕನಕದಾಸರು ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ದಾಸ ಸಾಹಿತ್ಯದಲ್ಲಿ ಪುರಂದರ ದಾಸರು ಹಾಗೂ ಕನಕದಾಸರನ್ನು ಶ್ರೇಷ್ಠರನ್ನಾಗಿ ಗುರುತಿಸಲಾಗುತ್ತದೆ. ೧೬ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಬಸವಣ್ಣನವರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರೆ ಕನಕದಾಸರು ಕೀರ್ತನೆಗಳ ಮುಖಾಂತರ ಸಮಾಜದಲ್ಲಿ ಬದಲಾವಣೆ ತಂದರು. ಈ ನಿಟ್ಟಿನಲ್ಲಿ ಮಕ್ಕಳು ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಮುಂದಾದಲ್ಲಿ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ದೇಶ್ ಮುಖ್ಯ ಉಪನ್ಯಾಸ ನೀಡಿ, ಮಹಾತ್ಮರನ್ನು ಜಾತಿಯ ಆಧಾರದಲ್ಲಿ ಗುರುತಿಸುತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅಂಬೇಡ್ಕರ್, ವಾಲ್ಮೀಕಿ, ಬಸವಣ್ಣರವರಂತಹ ಮಹಾತ್ಮರನ್ನು ಈಗಾಗಲೇ ಕೆಲವೇ ಕೆಲವು ಸಮಾಜಕ್ಕೆ ಸೀಮಿತ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಅವರ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ನೋಡಬೇಕು. ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣನ ದರ್ಶನಕ್ಕೆ ಉಡುಪಿಗೆ ಹೋದಾಗ ಮೇಲ್ವರ್ಗದವರು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲು ಆರಂಭಿಸಿದರು. ಆಗ ಶ್ರೀಕೃಷ್ಣ ಹಿಂದೆ ತಿರುಗಿ ಗೋಡೆಯ ಕಿಂಡಿಯ ಮೂಲಕ ದರ್ಶನ ನೀಡಿದನಂತೆ. ಭಗವಂತ ಕೇವಲ ಮೇಲ್ವರ್ಗದವರ ಸೊತ್ತಲ್ಲ ಎಂದು ಇದರಿಂದ ತಿಳಿದು ಬರುತ್ತದೆ ಎಂದು ಹೇಳಿದರು.
ಕನಕದಾಸರು ಸುಮಾರು ೩೧೬ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದರು, ಇದರಲ್ಲಿ ಮೋಹನ ತರಂಗಿಣಿ ಅತ್ಯಂತ ಪ್ರಮುಖ ಕೀರ್ತನೆಯಾಗಿದೆ. ಕನಕದಾಸರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಕೀರ್ತನೆಗಳನ್ನು ರಚಿಸಿದರು. ಕುಲ ಕುಲವೆಂದು ಹೊಡೆದಾಡಬೇಡಿ, ಬಡತನ ಬಂದಾಗ ನೆಂಟರ ಮನೆಯ ಬಾಗಿಲ ಬಡಿಯಬಾರದೆಂದು ಎಂದೆಲ್ಲಾ ಹೇಳಿ ಸಮಾಜವನ್ನು ಜಾಗೃತಗೊಳಿಸಿದರು. ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಹಿಂದೂ ಸಮಾಜದ ಘನತೆ ಕಾಪಾಡಿಕೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲಾರು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.ತಹಸೀಲ್ದಾರ್ ಮೇಘನಾ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ತಾಲೂಕು ಕುರುಬ ಸಮಾಜದ ಅಧಕ್ಷ ರಾಮೇಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧಕ್ಷ ತಮ್ಮಣ್ಣ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.