ಶೈಕ್ಷಣಿಕ ಬಲವರ್ಧನೆಗೆ ಗುಣಾತ್ಮಕವಾಗಿ ಬೋಧಿಸಿ

| Published : Jun 01 2024, 12:45 AM IST

ಸಾರಾಂಶ

ವಿಶೇಷ ಆಸಕ್ತಿ ಮತ್ತು ಮಕ್ಕಳ ಮನ ಮುಟ್ಟುವ ಹಲವಾರು ಚಟುವಟಿಕೆಗಳ ಮೂಲಕ ಪ್ರೌಢ ಹಂತ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರು ಇನ್ನೂ ಹೆಚ್ಚಿನ ಕ್ರಮಕೈಗೊಳ್ಳಿ.

ಹುಬ್ಬಳ್ಳಿ:

ಪ್ರಸಕ್ತ ವರ್ಷವನ್ನು ಶೈಕ್ಷಣಿಕ ಬಲವರ್ಧನಾ ವರ್ಷ ಎಂದು ಇಲಾಖೆ ಘೋಷಿಸಿದೆ. ಹೀಗಾಗಿ ಶೈಕ್ಷಣಿಕ ಬಲವರ್ಧನೆಗೆ ಗುಣಾತ್ಮಕ ಬೋಧನೆಗೆ ಶಿಕ್ಷಕರು ಒತ್ತು ನೀಡಬೇಕು ಎಂದು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಹೇಳಿದರು.

ಅವರು ಇಲ್ಲಿನ ಘಂಟಿಕೇರಿಯ ನೇತಾಜಿ ಸುಭಾಶ್ಚಂದ್ರ ಬೋಸ್ ಶಾಲೆ, ಶಾಸಕರ ಮಾದರಿ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.5, ಮಾದರಿ ಹೆಣ್ಣು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.1 ಈ ಮೂರು ಶಾಲೆಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಯೋಜನೆಯ ಅನ್ವಯ 2-8ನೇ ತರಗತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಿತ್ಯದ ಬೋಧನೆಯ ಜತೆಯಲ್ಲಿಯೇ ಈ ಸಪ್ತಾಹಗಳು ಸಾಗಲಿದ್ದು, ಇಲಾಖೆಯ ಘೋಷವಾಕ್ಯವನ್ನು ಅಕ್ಷರಶಹಃ ನಿಜವಾಗಿಸುವಲ್ಲಿ ಹುಬ್ಬಳ್ಳಿ ಶಹರದ ಶಿಕ್ಷಕರು ಸಿದ್ಧರಾಗಬೇಕು. ವಿಶೇಷ ಆಸಕ್ತಿ ಮತ್ತು ಮಕ್ಕಳ ಮನ ಮುಟ್ಟುವ ಹಲವಾರು ಚಟುವಟಿಕೆಗಳ ಮೂಲಕ ಪ್ರೌಢ ಹಂತ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಡಯಟ್‌ ಉಪನ್ಯಾಸಕಿ ಮಂಜುಳಾ ಅಂಬಿಗೇರ, ಸಾವಿತ್ರಿ ಕೋಳಿ ಮಾತನಾಡಿದರು.

ಇದೇ ಸಂದರ್ಭದಲ್ಲಿ 1ನೇ ವರ್ಗಕ್ಕೆ 5 ಮಕ್ಕಳನ್ನು ದಾಖಲಾತಿ ಹಾಗೂ ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು. ಎಂ.ಎಚ್. ಜಂಗಳಿ, ಶಿಕ್ಷಣ ಸಂಯೋಜಕರು, ಸಿಆರ್‌ಪಿ, ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು. ಬುಡೆನ್‌ಖಾನ್‌ ನಿರೂಪಿಸಿದರು. ನಿಂಗಪ್ಪ ಪಶುಪತಿಹಾಳ ವಂದಿಸಿದರು.