ಬಂಡಾಯ ಅಭ್ಯರ್ಥಿಗೆ ಪಾಠ ಕಲಿಸಿ: ಪ್ರಮೋದ್‌ ಮಧ್ವರಾಜ್‌ ಕರೆ

| Published : May 25 2024, 12:50 AM IST

ಸಾರಾಂಶ

ಬಿಜೆಪಿ ತತ್ವ ಸಿದ್ಧಾಂತ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿಯ ಎಲ್ಲಾ ವಿಧಾನ ಪರಿಷತ್ ಸದಸ್ಯರು ಗೆದ್ದಾಗ ಮಾತ್ರ ಮೇಲ್ಮನೆಯಲ್ಲಿ ಕಾಂಗ್ರೆಸಿನ ದುರಾಡಳಿತ ಮತ್ತು ಜನವಿರೋಧಿ ಕಾನೂನುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾನ ಪರಿಷತ್ ಚುನಾವಣೆಯ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ಗೆಲ್ಲಿಸಿ. ಈ ಮೂಲಕ, ಅಧಿಕಾರದ ಲಾಲಸೆಗೆ, ತಮ್ಮ ಸ್ವಾರ್ಥ ಲಾಭಕ್ಕಾಗಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕರೆ ನೀಡಿದ್ದಾರೆ .

ಡಾ. ಧನಂಜಯ ಸರ್ಜಿ ವಿಧಾನ ಪರಿಷತ್ತಿನಲ್ಲಿ ವಿಶೇಷವಾಗಿ ವೈದ್ಯಕೀಯ ಕ್ಷೇತ್ರದ ಪ್ರಾತಿನಿಧ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಯೋಗ್ಯ ಅಭ್ಯರ್ಥಿ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿ, ಶಿವಮೊಗ್ಗ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷ ಕೈಗೊಂಡ ತೀರ್ಮಾನವನ್ನು ಗೌರವಿಸುವುದು ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮಸ್ತ ಕಾರ್ಯಕರ್ತರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬಿಜೆಪಿ ತತ್ವ ಸಿದ್ಧಾಂತ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿಯ ಎಲ್ಲಾ ವಿಧಾನ ಪರಿಷತ್ ಸದಸ್ಯರು ಗೆದ್ದಾಗ ಮಾತ್ರ ಮೇಲ್ಮನೆಯಲ್ಲಿ ಕಾಂಗ್ರೆಸಿನ ದುರಾಡಳಿತ ಮತ್ತು ಜನವಿರೋಧಿ ಕಾನೂನುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಪದವೀಧರರೆಲ್ಲರೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜೊತೆಗಿದ್ದಾರೆ ಎಂಬುದನ್ನು ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಬಿಜೆಪಿಯನ್ನು ತೋರಿಸಬೇಕು ಎಂದವರು ಆಶಿಸಿದ್ದಾರೆ.