ಯಕ್ಷಗಾನ ಕಲಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸಿ: ಡಾ.ತಲ್ಲೂರು ಕರೆ

| Published : Feb 11 2025, 12:46 AM IST

ಯಕ್ಷಗಾನ ಕಲಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸಿ: ಡಾ.ತಲ್ಲೂರು ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಾಪುರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಯಕ್ಷ ನುಡಿಸಿರಿ ಬಳಗ ಆಶ್ರಯದಲ್ಲಿ ಕರ್ನಾಟಕ ಯಕ್ಸಗಾನ ಅಕಾಡೆಮಿ ಸಹಯೋಗದಲ್ಲಿ ಎಂಟನೇ ವರ್ಷದ ಮಕ್ಕಳ ಯಕ್ಷಗಾನ ಪ್ರದರ್ಶನ ಮತ್ತು ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರಮಕ್ಕಳು ಯಕ್ಷಗಾನ ಕಲಿತರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬುದು ಸರಿಯಲ್ಲ, ಯಕ್ಷಗಾನ ಕಲಿತ ಮಕ್ಕಳು ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಯಕ್ಷಗಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ಸಿದ್ಧಾಪುರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಯಕ್ಷ ನುಡಿಸಿರಿ ಬಳಗ ಆಶ್ರಯದಲ್ಲಿ ಕರ್ನಾಟಕ ಯಕ್ಸಗಾನ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡ ಎಂಟನೇ ವರ್ಷದ ಮಕ್ಕಳ ಯಕ್ಷಗಾನ ಪ್ರದರ್ಶನ ಮತ್ತು ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನ ದೈವಿಕ ಕಲೆ. ಅದನ್ನು ಅಭ್ಯಸಿಸಿದರೆ ಪೌರಾಣಿಕ ಜ್ಞಾನದ ಜೊತೆಗೆ ನೈತಿಕತೆಯ ಪಾಠವೂ ಸಿಗುತ್ತದೆ. ಯಕ್ಷಗಾನವನ್ನು ಕಲಿತ ಮಕ್ಕಳು ಕಲಾವಿದರಾಗಬೇಕೆಂದೇನೂ ಇಲ್ಲ. ಅವರು ಎಂಜಿನಿಯರೋ, ವೈದ್ಯರೋ ಅಥವಾ ಇನ್ನಿತರ ರಂಗದಲ್ಲಿಯೂ ಯಶಸ್ವಿಯಾಗುತ್ತಾರೆ. ಇದಕ್ಕೆ ಸಿದ್ಧಾಪುರದಲ್ಲಿ ಯಕ್ಷ ನುಡಿಸಿರಿ ಸಂಸ್ಥೆಯನ್ನು ಹುಟ್ಟುಹಾಕಿ ಯಕ್ಷಗಾನದ ಕಂಪನ್ನು ಹರಡುತ್ತಿರುವ ಡಾ.ಜಗದೀಶ್ ಶೆಟ್ಟಿ ಅವರೇ ಸಾಕ್ಷಿ ಎಂದು ಅವರು ಹೇಳಿದರು. ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಳದ ಧರ್ಮದರ್ಶಿ ಸಚ್ಚಿದಾನಂದ ಛಾತ್ರ ಮಾತನಾಡಿ, ಶಾಲಾ ಹಂತದಲ್ಲಿಯೇ ಯಕ್ಷಗಾನ ತರಬೇತಿ ಪಡೆದ ಮಕ್ಕಳು ಮುಂದೆ ಅವರು ಪ್ರಬುದ್ಧ ಕಲಾಸಕ್ತರಾಗುವುದರಲ್ಲಿ ಸಂಶಯವಿಲ್ಲ ಎಂದರು.ಕಾರ್ಯಕ್ರಮದ ರೂವಾರಿ ಯಕ್ಷ ನುಡಿಸಿರಿಯ ಅಧ್ಯಕ್ಷ ಡಾ.ಜಗದೀಶ್ ಶೆಟ್ಟಿ ಮಾತನಾಡಿ, ೨೦೧೨ರಲ್ಲಿ ಈ ಭಾಗದಲ್ಲಿ ಯಕ್ಷಗಾನದ ತಾಳಮದ್ದಲೆ ನಡೆಸಬೇಕು, ಈ ಮೂಲಕ ಕನ್ನಡ ನಾಡುನುಡಿಯನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ಯಕ್ಷ ನುಡಿಸಿರಿ ಸಂಘಟನೆಯನ್ನು ಪ್ರಾರಂಭಿಸಲಾಯಿತು. ಕಳೆದ ೧೨ ವರ್ಷಗಳಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಪಾರ ಜನಪ್ರಿಯತೆ ಪಡೆದಿದೆ. ತೆಂಕು ಬಡಗುತಿಟ್ಟಿನ ಪ್ರಬುದ್ಧ ಕಲಾವಿದರನ್ನು ಕರೆಸಿ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸಿದ್ದೇವೆ ಎಂದರು.ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಶೆಟ್ಟಿ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರ ಕುಲಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ತುಂಬಿಕಲ್ಲಾಯ, ಉದ್ಯಮಿ ಶ್ರೀಕಾಂತ್ ನಾಯಕ್, ನುಡಿಸಿರಿ ಸದಸ್ಯ ಕೃಷ್ಣಮೂರ್ತಿ ಅಡಿಗ ಉಪಸ್ಥಿತರಿದ್ದರು.ಈ ಸಂದರ್ಭ ಯಕ್ಷಗಾನ ಗುರು ನರಸಿಂಗ ತುಂಗ ಅವರಿಗೆ ಗುರುವಂದನೆ ಹಾಗೂ ಮಕ್ಕಳ ಯಕ್ಷ ಶಿಕ್ಷಣಕ್ಕೆ ಸಹಕರಿಸಿದ ಯಕ್ಷ ನುಡಿಸಿರಿ ಕಾರ್ಯದರ್ಶಿ ಭೋಜರಾಜ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಲಂಕಿಣಿ ಮೋಕ್ಷ ಮತ್ತು ಕನಕಾಂಗಿ ಕಲ್ಯಾಣ ಎಂಬ ಎರಡು ಪ್ರಸಂಗಗಳು ಪ್ರದರ್ಶನಗೊಂಡವು. ಇದರಲ್ಲಿ ಸುಮಾರು ೪೫ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.