ಮಕ್ಕಳಿಗೆ ಯೋಗ, ಸಂಸ್ಕೃತಿ ಕಲಿಸಿ: ಗಣಪತಿ ಎನ್. ಹೆಗಡೆ

| Published : Jan 13 2025, 12:45 AM IST

ಸಾರಾಂಶ

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ನಮ್ಮ ಇಂದ್ರಿಯಗಳು ನಮಗರಿವಿಲ್ಲದೇ ನಿಯಂತ್ರಣ ತಪ್ಪಿ ಸಾಗುವ ಅಪಾಯವಿರುತ್ತದೆ. ಅದಕ್ಕೆ ಯೋಗವೊಂದೇ ಪರಿಹಾರ.

ಯಲ್ಲಾಪುರ: ಯೋಗದಿಂದ ಆರೋಗ್ಯ, ಮಾನಸಿಕ, ಶಾರೀರಿಕ, ಎಲ್ಲ ಸಂಪತ್ತನ್ನು ಗಳಿಸಬಹುದು. ಆ ನೆಲೆಯಲ್ಲಿ ಯೋಗ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಒಂದು ಜಾಗೃತಿಯ ಕಾರ್ಯಕ್ರಮ ಇದಾಗಿದೆ ಎಂದು ಅಂತಾರಾಷ್ಟ್ರೀಯ ಯೋಗಪಟು ಗಣಪತಿ ಎನ್. ಹೆಗಡೆ ಸಿದ್ದಾಪುರ ತಿಳಿಸಿದರು.

ಜ. ೧೨ರಂದು ಪಟ್ಟಣದ ವೆಂಕಟರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಯಲ್ಲಾಪುರ ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರಕನ್ನಡ ಯೋಗ ಫೆಡರೇಶನ್ ಶಿರಸಿ ಮತ್ತು ಯಲ್ಲಾಪುರ ಅಡಿಕೆ ವ್ಯವಹಾರಸ್ಥರ ಸಂಘದ ಆಶ್ರಯದಲ್ಲಿ ಯೋಗ ಸಮ್ಮೇಳನ ಮತ್ತು ಯೋಗ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಯೋಗವೂ ಒಲಿಂಪಿಕ್ ಕ್ರೀಡೆಯಲ್ಲಿ ಸೇರ್ಪಗೊಳ್ಳುತ್ತಿದೆ. ನಮ್ಮ ಮಕ್ಕಳಿಗೆ ಯೋಗದ ಜತೆ ಭಾರತೀಯ ಸಂಸ್ಕೃತಿ, ಪರಂಪರೆ, ಮೌಲ್ಯ ಮತ್ತು ಗುರು ಹಿರಿಯರನ್ನು ಗೌರವಿಸುವ ಶಿಕ್ಷಣ ನೀಡಬೇಕಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ನಮ್ಮ ಇಂದ್ರಿಯಗಳು ನಮಗರಿವಿಲ್ಲದೇ ನಿಯಂತ್ರಣ ತಪ್ಪಿ ಸಾಗುವ ಅಪಾಯವಿರುತ್ತದೆ. ಅದಕ್ಕೆ ಯೋಗವೊಂದೇ ಪರಿಹಾರ ಎಂದರು.ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಮಾತನಾಡಿ, ಎಷ್ಟೇ ಹಣ, ಐಶ್ವರ್ಯಗಳಿದ್ದರೂ ಆರೋಗ್ಯ ಸಿಗುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಸಣ್ಣಂದಿನಿಂದಲೇ ಯೋಗಾಭ್ಯಾಸ ಬೆಳೆಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.ಯಲ್ಲಾಪುರ ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಇಂದು ಪ್ರಯೋಗಾತ್ಮಕವಾಗಿ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ. ಪಾಲಕರು ಹೆಚ್ಚು ಆಸಕ್ತಿ ವಹಿಸಿ, ತಮ್ಮ ಮಕ್ಕಳನ್ನು ಯೋಗದ ತರಬೇತಿಗೆ ಕಳಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಂತೆ ಗಮನ ಹರಿಸಬೇಕು. ಬದುಕಿಗೆ ಹಣವೊಂದೇ ಪ್ರಧಾನವಲ್ಲ. ಆರೋಗ್ಯ ಅತ್ಯಂತ ಮಹತ್ವದ್ದು ಎಂದರು.ತಾಲೂಕು ಉಪಾಧ್ಯಕ್ಷ ನಾಗೇಶ ರಾಯ್ಕರ್, ಕೋಶಾಧ್ಯಕ್ಷ ಡಿ.ಎನ್. ಗಾಂವ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಯೋಗ ಸಾಧಕರಾದ ಶಂಕರ ಭಟ್ಟ ಪುಣೆ, ಮಂಜುನಾಥ ದೇಸಾಯಿ, ವಿಶಾಲಾಕ್ಷಿ ಭಟ್ಟ, ನಾರಾಯಣ ಭಾಗ್ವತ, ಡಿ.ಎನ್. ಗಾಂವ್ಕರ, ರವಿ ಹೆಗಡೆ, ವಿ.ಕೆ. ಭಟ್ಟ, ನೇಮಿರಾಜ, ಪಾರ್ವತಿ ಹೆಗಡೆ, ನಾಗವೇಣಿ ಹೆಗಡೆ, ಜಾಹ್ನವಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ರಾಧಾ ಭಟ್ಟ ಪ್ರಾರ್ಥಿಸಿದರು. ಸಂಶ್ಥೆಯ ಸಹ ಕಾಯದರ್ಶಿ ಚಂದ್ರಶೇಖರ ಭಟ್ಟ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ ಭಟ್ಟ ನಿರ್ವಹಿಸಿದರು. ಯೋಗ ಮಾತೆ ಆಶಾ ಭಗನಗದ್ದೆ ವಂದಿಸಿದರು. ಹೂತ್ಕಳ ಧನ್ವಂತರಿ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ಇಂದು

ಭಟ್ಕಳ: ಅನಾದಿ ಕಾಲದಿಂದಲೂ ಪ್ರಸಿದ್ಧಿಯಾಗಿರುವ ಹಾಗೂ ಸರ್ವರೋಗ ನಿವಾರಕ ಮಹಿಮೆ ಹೊಂದಿರುವ ತಾಲೂಕಿನ ಮಾರುಕೇರಿಯ ಹೂತ್ಕಳದ ಧನ್ವಂತರಿ ವಿಷ್ಣುಮೂರ್ತಿ, ವಿಘ್ನೇಶ್ವರ ದೇವಸ್ಥಾನದಲ್ಲಿ ಜ. 13ರಂದು ಮಹಾಧನ್ವಂತರಿ ಹವನ, ಧನ್ವಂತರಿ ವ್ರತಕಥೆ, ಅಷ್ಟದೃವ್ಯ ಗಣಹವನ ಹಾಗೂ ದೇವರ ವರ್ಧಂತ್ಯುತ್ಸವ ನಡೆಯಲಿದೆ.ವೇದ ಮೂರ್ತಿ ಕಟ್ಟೆ ತಿಮ್ಮಣ್ಣ ಭಟ್ಟರ ಪ್ರಧಾನ ಆಚಾರ್ಯತ್ವದಲ್ಲಿ ಜ. 13ರಂದು ಬೆಳಗ್ಗೆ ಮಹಾಪ್ರಾರ್ಥನೆ ಶುದ್ಧೀಕರ್ಮ, ಪುಣ್ಯಾವಾಚನ, ಪ್ರಧಾನ ಸಂಕಲ್ಪ, ಋತ್ವಿಗ್ವರ್ಣನ, ಮಧುರ್ಕಪೂಜೆ, ನಾಂದಿ, ಮಾತೃಕಾಪೂಜೆ, ಕೌತುಕಬಂಧನ, ಸಹಸ್ರ ತುಳಸಿ ಅರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಲಿವೆ.

ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ವಾದಿರಾಜ ಭಟ್ ಅವರನ್ನು ಗೌರವಿಸಲಾಗುತ್ತದೆ. ಸಂಜೆ 5.30ರಿಂದ ಉದಯ ಪ್ರಭು ಬಳಗದವರಿಂದ ಭಜನ್ ಸಂಧ್ಯಾ ನಡೆಯಲಿದೆ. ರಾತ್ರಿ ರಂಗಪೂಜೆ, ಮಹಾಬಲಿ, ಧ್ವಜಾರೋಹಣ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ಆಶೀರ್ವಾದ ಗೃಹಣ ನೆರವೇರಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಗಣಪತಿ ಭಟ್ಟ ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ.