ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಪ್ರಾಧ್ಯಾಪಕನೊಬ್ಬ ಪಾಠ ಮಾಡುವ ಸಂದರ್ಭದಲ್ಲೇ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿ ಅದೇ ತರಗತಿಯ ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ರ ಒಡೆತನದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಮೈಕ್ರೋಬಯಾಲಾಜಿ ವಿಷಯದ ಪ್ರಾಧ್ಯಾಪಕ ನೆಲಮಂಗಲ ನಿವಾಸಿ ಅಬ್ದುಲ್ (40) ಕಾಲೇಜು ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದಾನೆ. ತರಗತಿಯಲ್ಲಿ ಪಾಠ ಮಾಡುವಾಗ ಪ್ರಾಧ್ಯಾಪಕ, ‘ನಮ್ಮ ಬ್ಯಾಚ್‍ನ ಹುಡುಗಿಯೊಬ್ಬಳಿಗೆ ನಾನು ಪ್ರೊಪೋಸ್‌ ಮಾಡಲು ಬಯಸುತ್ತೇನೆ’ ಎಂದು ಹೇಳಿ ವಿದ್ಯಾರ್ಥಿನಿಯ ಹೆಸರನ್ನು ಪ್ರಸ್ತಾಪಿಸಿದ್ದಾನೆ. ಜೊತೆಗೆ ಪ್ರೇಮ ನಿವೇದನೆಗೆ ಚಾಕೋಲೆಟ್‌ ಸಹ ತಂದಿದ್ದಾಗಿ ಹೇಳಿದ್ದಾರೆ. ತಕ್ಷಣವೇ ವಿದ್ಯಾರ್ಥಿನಿ ಪ್ರಾಧ್ಯಾಪಕನನ್ನು ಪ್ರಶ್ನಿಸಿದ್ದಾಳೆ. ನಂತರ ಪ್ರಾಧ್ಯಾಪಕ, ‘ನೀನೇ ನನಗೆ ಐ ಲವ್ ಯು’ ಎಂದು ಹೇಳಿರುವುದಾಗಿ ವಾದಿಸಿದ್ದು ಇದಕ್ಕೆ ಯುವತಿ ‘ನಾನು ಹಾಗೆ ಹೇಳಿಲ್ಲ. ನಿಮಗೆ ಮಾತನಾಡಬೇಕು ಎನಿಸಿದರೆ ನೇರವಾಗಿ ಪ್ರಾಂಶುಪಾಲರ ಬಳಿ ಹೋಗಬಹುದು. ಎಲ್ಲ ವಿದ್ಯಾರ್ಥಿಗಳು ಬರುತ್ತಾರೆ’ ಎಂದಿದ್ದಾಳೆ.

ಇದಾದ ಬಳಿಕವೂ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದಿದ್ದು, ಹಾಗಾದರೆ ‘ನೇಕೆ ನನಗೆ ಪ್ರೊಪೋಸ್‌ ಮಾಡಿದೆ’ ಎಂದು ಪ್ರಾಧ್ಯಾಪಕ ಕೇಳಿದಾಗ, ‘ಕ್ಷಮಿಸಿ, ನಾನು ಯಾವಾಗ ಪ್ರೊಪೋಸ್‌ ಮಾಡಿದ್ದೇನೆ ತೋರಿಸಿ’ ಎಂದು ಸವಾಲು ಹಾಕಿದ್ದಾಳೆ.

ವೈರಲ್ ಆದ ಹಲ್ಲೇ ವಿಡಿಯೋ:


ಅಬ್ದುಲ್ ಮಾತುಗಳಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯ ಸಹಪಾಠಿಗಳು ಸ್ತ್ರೀಕುಲಕ್ಕೆ ಗೌರವ ಇಲ್ಲವೇ? ಎಂದು ಪ್ರಶ್ನಿಸಿದ್ದು, ಕಾಲೇಜು ಕ್ಯಾಂಪಸ್‌ನಲ್ಲಿಯೇ ಅಟ್ಟಾಡಿಸಿಕೊಂಡು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಸ್ವತಃ ವಿದ್ಯಾರ್ಥಿನಿಯೇ ಚಪ್ಪಲಿ ಸೇವೆ ಮಾಡಿದ್ದಾಳೆ. ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದ ಬಳಿಕ ಅಬ್ದುಲ್ ಅಲ್ಲಿಂದ ಓಡಿ ಹೋಗಿದ್ದಾನೆ.

ಘಟನೆ ನಂತರ ಕಾಲೇಜು ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ಬೆನ್ನಲ್ಲೇ ನೆಲಮಂಗಲ ಗ್ರಾಮಾಂತರ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದು, ಘಟನೆ ಕುರಿತು ವಾಸ್ತವಾಂಶಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಾಧ್ಯಾಪಕ ಅಬ್ದುಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.