ಸಾರಾಂಶ
ಭಟ್ಕಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳದ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ ಪಟ್ಟಣದಲ್ಲಿ ಬುಧವಾರ ಬಾವಿಗೆ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಗುರುವಾರ ಭಟ್ಕಳಕ್ಕೆ ಆಗಮಿಸಿದ್ದ ಬಾಲಕನ ಪಾಲಕರು ಹಾಗೂ ಸಂಬಂಧಿಕರು ಬಾಲಕನ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಬಾಲಕ ಮೃತಪಟ್ಟ ಸ್ಥಳ ವೀಕ್ಷಿಸಿದ ಸಂಬಂಧಿಕರು ಈ ಭಾಗದಲ್ಲಿ ಬಾಲಕನು ಬಂದು ಬಾವಿಯಲ್ಲಿ ಬೀಳಲು ಶಿಕ್ಷಕರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ದೂರಿ ದಿಢೀರ್ ಪ್ರತಿಭಟನೆಗಿಳಿದರು. ಬಾಲಕರನ್ನು ಇಂತಹ ಸ್ಥಳಕ್ಕೆ ಹೋಗಲು ಬಿಟ್ಟಿರುವುದೇ ತಪ್ಪು ಎಂದು ದೂರಿದರು.ಕಳೆದ ವಾರವಷ್ಟೇ ಮುರ್ಡೇಶ್ವರದ ಸಮುದ್ರದ ಅಲೆಗೆ ಸಿಲುಕಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಮತ್ತೊಂದು ಬಾಲಕನ ಸಾವು ಸಂಭವಿಸಿದ್ದು, ಮಕ್ಕಳು ಪ್ರವಾಸಕ್ಕೆ ಬರುವುದೇ ಬೇಡ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ೭ ಮಕ್ಕಳಿಗೆ ಒಬ್ಬ ಶಿಕ್ಷಕರಿರುತ್ತಾರೆ ಎಂದು ನಮ್ಮನ್ನು ಮನವೊಲಿಸಿದ್ದಾರೆ. ಆದರೆ ಶಿಕ್ಷಕರ ತಾರತಮ್ಯ ನೀತಿಯಿಂದ ಬಾಲಕ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದರು. ತಪ್ಪಿತಸ್ಥ ಶಿಕ್ಷಕರನ್ನು ಸ್ಥಳಕ್ಕೆ ಕರೆದುಕೊಂಡು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದೂ ಪಟ್ಟು ಹಿಡಿದರು.
ತಹಸೀಲ್ದಾರ್ ನಾಗೇಂದ್ರ ಶೆಟ್ಟಿ, ನಗರ ಠಾಣೆಯ ಇನ್ಸಪೆಕ್ಟರ್ ಗೋಪಿಕೃಷ್ಣ ಘಟನೆ ಬಗ್ಗೆ ದೂರು ಕೊಟ್ಟರೆ ದಾಖಲಿಸಿಕೊಳ್ಳುತ್ತೇವೆ. ಪ್ರತಿಭಟನೆ ನಡೆಸುವುದು ಬೇಡ ಎಂದು ಮೃತನ ಸಂಬಂಧಿಕರ ಮನವೊಲಿಸಲು ಪ್ರಯತ್ನಿಸಿದರೂ ಸಂಬಂಧಿಕರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಅವರನ್ನು ಅಲ್ಲಿಂದ ಮೃತದೇಹ ಇರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ತಹಸೀಲ್ದಾರ್ ಮುತ್ತು ಪೊಲೀಸರು ಯಶಸ್ವಿಯಾದರು.ಅಲ್ಲಿಯೂ ಪ್ರತಿಭಟನೆ ಮುಂದುವರಿಸಿದ ಸಂಬಂಧಿಕರು, ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದ ಘಟನೆ ನಡೆಯಿತು. ಕೊನೆಗೂ ಆಕ್ರೋಶಿತರನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿ ಕುಟುಂಬಸ್ಥರಿಂದ ದೂರನ್ನು ಸ್ವೀಕರಿಸಿದರು. ಬಳಿಕ ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆಗೊಳಿಸಿದ ತಾಲೂಕು ಆಡಳಿತ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದರು.
ಮೃತದೇಹವನ್ನು ಗುರುವಾರ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳಕ್ಕೆ ತೆಗೆದುಕೊಂಡು ಹೋದರು. ಬುಧವಾರ ಸಂಜೆ ಘಟನೆ ಸಂಭವಿಸಿದ್ದರಿಂದ ಪ್ರವಾಸಕ್ಕೆ ಬಂದಿದ್ದ ಇತರೆ ವಿದ್ಯಾರ್ಥಿಗಳಿಗೆ ಇಲ್ಲಿನ ಕಿತ್ತೂರು ಚೆನ್ನಮ್ಮ ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಸ್ಥಳಕ್ಕೆ ಆಗಮಿಸುವ ಪೂರ್ವ ಮೃತ ಬಾಲಕನ ಪಾಲಕರು, ಸಂಬಂಧಿಕರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಸ್ಥಳದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.