ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಗುಂಬಳ್ಳಿ ಪ್ರೌಢಶಾಲೆಯ ಶಿಕ್ಷಕ ಎಂ.ವೀರಭದ್ರಸ್ವಾಮಿ ಶಾಲಾ ಪ್ರವಾಸದ ವೇಳೆ ಬಸ್ ಚಲಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಡಿದ್ದ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ತಡೆ ನೀಡಿದೆ.
ಘಟನೆ ವಿವರ:ತಾಲೂಕಿನ ಗುಂಬಳ್ಳಿ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ವೀರಭದ್ರಸ್ವಾಮಿ ಎಂಬುವರು ೨೦೨೪-೨೫ ನೇ ಸಾಲಿನಲ್ಲಿ ಮಕ್ಕಳ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕೆಲ ಹೊತ್ತು ಬಸ್‌ನ್ನು ಚಲಾಯಿಸಿದ್ದರು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲನೆ ನಡೆಸಿದಾಗ ಇವರು ಬಸ್ ಚಾಲಕನಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಬಸ್‌ನ್ನು ಚಲಿಸಿ ಪಕ್ಕಕ್ಕೆ ನಿಲ್ಲಿಸಬೇಕಿತ್ತು ಇದರಿಂದ ಬಸ್ ಚಾಲನೆ ಮಾಡಿದೆ ಎಂದು ಲಿಖಿತ ಹೇಳಿಕೆ ನೀಡಿದ್ದರು. ಹಾಗಾಗಿ ಇವರನ್ನು ಏಕಾಏಕಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡಿದ್ದರು.ಈ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಶಾಲೆಗೆ ಬರದಿದ್ದರೆ ನಾವು ಬರುವುದಿಲ್ಲ ಅವರು ಯಾವುದೇ ತಪ್ಪು ಮಾಡಿಲ್ಲ, ಅವರಿಲ್ಲದಿದ್ದರೆ ನಮ್ಮ ಪ್ರಾಣ ಹೋಗುತ್ತಿತ್ತು. ಬಸ್‌ನ ಚಾಲಕ ಅನಾರೋಗ್ಯದಿಂದ ನರಳುತ್ತಿದ್ದ ವೇಳೆ ಅವರು ಬಸ್ ಚಾಲನೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಪ್ರತಿಭಟನೆ ನಡೆಸಿ ೨ ದಿನ ಶಾಲೆಗೆ ಹಾಜರಾಗಿರಲಿಲ್ಲ. ಇದಾದ ಬಳಿಕ ಉಪ ನಿರ್ದೇಶಕರು ಶಾಲೆಗೆ ಬಂದು ಮಕ್ಕಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರಲ್ಲಿ ಮನವಿ ಮಾಡಿ ಈ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆನೀಡಿದ್ದರು. ಬಳಿಕ ವೀರಭದ್ರಸ್ವಾಮಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಇದರ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಾಗಿದ್ದು ಅವರು ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರಸ್ವಾಮಿ, ನನಗೆ ನ್ಯಾಯ ದೊರಕಿದೆ, ನನ್ನ ಅಮಾನತಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ತಡೆ ನೀಡಿದೆ. ಇದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇದರೊಂದಿಗೆ ನನ್ನ ಇಂತಹ ಕಠಿಣ ಸಂದರ್ಭದಲ್ಲಿ ಸಹಕಾರ ನೀಡಿದ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ಗುಂಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.