ಶಿಕ್ಷಕಿ ಅಮಾನತ್ ಆದೇಶ ರದ್ದುಪಡಿಸುವಂತೆ ಮನವಿ

| Published : Aug 13 2025, 12:30 AM IST

ಸಾರಾಂಶ

ಶಿಕ್ಷಕಿಯು ಕಳೆದ ೨ ವರ್ಷಗಳಿಂದ ಶಾಲೆಯ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದರು. ಈ ವರೆಗೂ ಅವರ ಬಗ್ಗೆ ಯಾವುದೇ ದೂರುಗಳು ಕಂಡು ಬಂದಿಲ್ಲ.

ಮುಂಡಗೋಡ: ವಿದ್ಯಾರ್ಥಿಯನ್ನು ಥಳಿಸಿದ ಆರೋಪದ ಮೇಲೆ ಅಮಾನತ್ತುಗೊಂಡಿರುವ ತಾಲೂಕಿನ ಕಾಳಗನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಭಾರತಿ ನಾಯ್ಕ ಅವರನ್ನು ಮತ್ತೆ ಶಾಲೆಗೆ ಮರು ನೇಮಕ ಮಾಡಬೇಕೆಂದು ಆಗ್ರಹಿಸಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಹಾಗೂ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಎರಡನೇ ತರಗತಿ ವಿದ್ಯಾರ್ಥಿ ಮಹೇಶ ನಾಯ್ಕರ್ ಎಂಬುವನನ್ನು ಅಭ್ಯಾಸ ಮಾಡಲಿಲ್ಲ ಎಂಬ ಕಾರಣಕ್ಕೆ ಬಾಸುಂಡೆ ಬರುವಂತೆ ಥಳಿಸಿದ ಆರೋಪದ ಮೇಲೆ ಗ್ರಾಮಸ್ಥರ ದೂರು ಇಲ್ಲದಿದ್ದರೂ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.

ಶಿಕ್ಷಕಿಯು ಕಳೆದ ೨ ವರ್ಷಗಳಿಂದ ಶಾಲೆಯ ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದರು. ಈ ವರೆಗೂ ಅವರ ಬಗ್ಗೆ ಯಾವುದೇ ದೂರುಗಳು ಕಂಡು ಬಂದಿಲ್ಲ. ಶಿಕ್ಷಕಿ ಭಾರತಿ ನಾಯ್ಕ ಅಮಾನತು ಆದೇಶವನ್ನು ರದ್ದುಪಡಿಸಿ ಅವರನ್ನೇ ನಮ್ಮ ಶಾಲೆಗೆ ಮರು ನೇಮಕ ಆದೇಶ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮುಂಡಗೋಡ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ್, ನಾಗರಾಜ ಚಿಗಳ್ಳಿ, ರಾಮಚಂದ್ರ ಬೆಳವತ್ತಿ, ರಿಯಾಜ್ ಬಾಚಣಕಿ, ಪರಶುರಾಮ ಉಪ್ಪಾರ ಮುಂತಾದವರಿದ್ದರು ಉಪಸ್ಥಿತರಿದ್ದರು.