ಹನುಮಸಾಗರ ಪಟ್ಟಣದ ವಿದ್ಯಾನಗರದಲ್ಲಿ ವಾಸಿಯಾಗಿರುವ ಶಿಕ್ಷಕ ಶೇಖರ ಮೇಟಿ ಕುರಿ ಸಾಕಣೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಬೇರೆ ಭಾಗಗಳಿಂದ ರೈತರು ಆಗಮಿಸಿ, ಇವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಹನುಮಸಾಗರ: ಪಟ್ಟಣದ ವಿದ್ಯಾನಗರದಲ್ಲಿ ವಾಸಿಯಾಗಿರುವ ಶಿಕ್ಷಕ ಶೇಖರ ಮೇಟಿ ಕುರಿ ಸಾಕಣೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಶೇಖರ ಮೇಟಿ ಯಲಬುರ್ಗಾ ತಾಲೂಕಿನ ಮ್ಯಾದನೇರಿ ಗ್ರಾಮದವರು. ೨೦೧೮ರಲ್ಲಿ ಕಬ್ಬರಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು.

ಸರ್ಕಾರಿ ನೌಕರಿ ಸೇರುವುದಕ್ಕಿಂತ ಮೊದಲು ೨೦೦೯ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಇದರೊಂದಿಗೆ ಏನಾದರೂ ಕೃಷಿಗೆ ಸಂಬಂಧಿಸಿದ ಉಪಕಸುಬು ಆರಂಭಿಸಬೇಕು ಎಂದು ಮನೆಯವರೊಂದಿಗೆ ಚರ್ಚಿಸಿ, ಮನೆಯ ವರಾಂಡದಲ್ಲಿ ಅಟ್ಟಣಿಕೆ ಪದ್ಧತಿಯಲ್ಲಿ ಟಗರು ಸಾಕಾಣಿಕೆ ಆರಂಭಿಸಿದರು.

ಬಾಡಿಗೆ ಮನೆ ಅವಕಾಶ: ಸರ್ಕಾರಿ ನೌಕರಿ ಸಿಕ್ಕ ಮೇಲೆ ಹನುಮಸಾಗರದಲ್ಲಿ ಅವರಿಗೆ ಕುರಿ ಸಾಕಣೆಗೆ ತಕ್ಕುದಾದ ಬಾಡಿಗೆ ಮನೆ ಲಭಿಸಿತು. ಮನೆ ಪಕ್ಕದಲ್ಲಿರುವ ಖಾಲಿ ನಿವೇಶನವನ್ನು ಮಾಲೀಕರ ಒಪ್ಪಿಗೆ ಮೇರೆಗೆ ಶೇಖರ ಹಾಗೂ ಪತ್ನಿ ಮೇಘಾ ದಂಪತಿ ಸ್ವಚ್ಛಗೊಳಿಸಿದರು. ನಿವೇಶನದಲ್ಲಿ ಸ್ಮಾಲ್ ಸ್ಕೇಲ್ ಟಗರು ಫಾರ್ಮ್ ಮಾಡುವ ಗುರಿ ಹೊಂದಿದ್ದರು. ಅದರಲ್ಲಿ ೩೦x೯ ಮೀಟರ್ ಅಳತೆಯಲ್ಲಿ ಅಟ್ಟಣಿಕೆ ಮಾದರಿಯ ತಗಡಿನ ಶೆಡ್ಡ್ ನಿರ್ಮಿಸಿಕೊಂಡು ಸಾಕಾಣಿಕೆ ಆರಂಭಿಸಿದರು.

ಸಾಕಾಣಿಕೆ ಹೇಗೆ?: ಪ್ರತಿನಿತ್ಯ ಕೊಟ್ಟಿಗೆ ಸ್ವಚ್ಛಗೊಳಿಸಿ ಸ್ಯಾನಿಟೈಸರ್ ಮಾಡುವ ಜತೆಯಲ್ಲಿ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುತ್ತಾರೆ. ಒಂದು ವರ್ಷಕ್ಕೆ ಎರಡು ಬ್ಯಾಚ್‌ನಂತೆ ಟಗರುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಒಂದು ಬ್ಯಾಚ್‌ಗೆ ೨೫ರಿಂದ ೩೦ ಮರಿಗಳನ್ನು ಸಾಕಲಾಗುತ್ತದೆ. ಸರಿಯಾದ ಸಮಯಕ್ಕೆ ಒಣ ಮೇವುಗಳಾದ ಶೇಂಗಾ ಹೊಟ್ಟು, ರಾಗಿ ಹುಲ್ಲು, ಪೌಷ್ಟಿಕಾಂಶಯುಕ್ತ ಸಾಂದ್ರೀಕೃತವಾದ ಮೆಕ್ಕೆಜೋಳ, ಗೋ, ಶೇಂಗಾ ಹಿಂಡಿ, ಸೋಯಾ ಹಿಂಡಿ ಹಾಗೂ ಹುರುಳಿಯನ್ನು ಕುರಿ ವಯಸ್ಸಿಗೆ ಮತ್ತು ದೇಹದ ಅಗತ್ಯಕ್ಕೆ ಅನುಗುಣವಾಗಿ ಉಣಬಿಡಿಸುತ್ತಾರೆ. ಜತೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುತ್ತಾರೆ. ವಾರದಲ್ಲಿ ಎರಡು ದಿನ ವೈದ್ಯರ ಮಾರ್ಗದರ್ಶನ ಮೇರೆಗೆ ಲಿವರ್ ಟಾನಿಕ್ ಅನ್ನು ಹಾಕಲಾಗುತ್ತದೆ. ಮರಿಗಳಿಗೆ ಹೊರಗಡೆಯಿಂದ ಹಾಲನ್ನು ಖರೀದಿಸಿ ಹಾಲುಣ್ಣಿಸುತ್ತಾರೆ. ಇಷ್ಟೆಲ್ಲ ಮಾಡಿದಾಗ ಮಾರುಕಟ್ಟೆಯಲ್ಲಿ ಉತ್ತಮವಾದ ಲಾಭ ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಶಿಕ್ಷಕ ಶೇಖರ ಬೆಳಗಿನ ಎಲ್ಲ ಕೆಲಸಗಳನ್ನು ಪೂರೈಸಿದ ನಂತರ ಪತ್ನಿ ಮೇಘಾ ಮೇಟಿ ಅವರು ಕುರಿಗಳ ಆರೈಕೆ ಮಾಡುತ್ತಾರೆ. ಬೇರೆ ಭಾಗಗಳಿಂದ ರೈತರು ಆಗಮಿಸಿ, ಇವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.ಆರೋಗ್ಯ ಲಾಭವೇ ಹೆಚ್ಚು: ಶಾಲಾ ಅವಧಿಯಲ್ಲಿ ಮುಗ್ಧ ಮನಸ್ಸಿನ ಮಕ್ಕಳ ಪ್ರೀತಿಯ ಒಡನಾಟ ಇರುತ್ತದೆ. ನಂತರ ಮುಗ್ಧ ಪ್ರಾಣಿಗಳ ನಂಬಿಕೆಯ ಒಡನಾಟವಿದೆ. ಇದು ನಮಗೆ ಖುಷಿಯಿಂದ ಜೀವಿಸುವ ಅವಕಾಶವಿದ್ದಂತೆ. ಆರ್ಥಿಕ ಲಾಭಕ್ಕಿಂತ ಆರೋಗ್ಯದ ಲಾಭವೇ ಹೆಚ್ಚು ಎಂದು ಶಿಕ್ಷಕ ಶೇಖರ ಮೇಟಿ ಹೇಳುತ್ತಾರೆ.