ಸಾರಾಂಶ
ಶಿವಾನಂದ ಬಿ.ಬಿ. 18 ವರ್ಷಗಳ ಸೇವೆಯಲ್ಲಿ 28 ಮಕ್ಕಳನ್ನು ಮೊರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆ ಮಾಡಿಸಿದ್ದಾರೆ.
ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪಿಎಂಶ್ರೀ ಬಾಲಕರ ಸ.ಮಾ.ಹಿ.ಪ್ರಾ. ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಶಿವಾನಂದ ಬಿ.ಬಿ. ಪ್ರವೇಶ ಪರೀಕ್ಷೆಗಳಲ್ಲಿ ಮಕ್ಕಳು ಪಾಸಾಗಿ ನವೋದಯ, ಮೊರಾರ್ಜಿಯಂಥ ಶಾಲೆಗಳಲ್ಲಿ ಪ್ರವೇಶ ಪಡೆಯಲು ಕಾರಣರಾಗಿದ್ದಾರೆ. ಹಾಗಾಗಿ ಇವರು ಶಾಲಾ ಮಕ್ಕಳಿಗೆ ಪ್ರೀತಿಯ, ಅಭಿಮಾನದ ಶಿಕ್ಷಕರಾಗಿದ್ದಾರೆ.
ಶಿವಾನಂದ ಬಿ.ಬಿ. 18 ವರ್ಷಗಳ ಸೇವೆಯಲ್ಲಿ 28 ಮಕ್ಕಳನ್ನು ಮೊರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆ ಮಾಡಿಸಿದ್ದಾರೆ. ಮೂವರು ಮಕ್ಕಳು ನವೋದಯ, 13 ಮಕ್ಕಳು ಆದರ್ಶ ವಿದ್ಯಾಲಯ, 13 ಮಕ್ಕಳು ಎನ್‌ಎಂಎಂಎಸ್ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಿಸಿರುತ್ತಾರೆ. ಅಷ್ಟೇ ಅಲ್ಲದೇ ತನ್ನ ಶಾಲೆ ಪಿಎಂಶ್ರೀ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆ ಆಗಲು ಶ್ರಮಿಸಿರುತ್ತಾರೆ. ತನ್ನ ಶಾಲೆಯ 17 ಮಕ್ಕಳು ನಿರಂತರವಾಗಿ ಮೂರು ವರ್ಷಗಳ ಕಾಲ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ. ಹಾಗೆಯೇ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಶಿಕ್ಷಕರ ನೋವಿಗೆ ಧ್ವನಿಯಾಗಿದ್ದಾರೆ.ಕೊರೋನಾ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ 650ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ. ಬಡ ನಿರುದ್ಯೋಗಿಗಳಿಗೆ ಟಿಇಟಿ, ಸಿಇಟಿ ಕೋಚಿಂಗ್ ಶಿಬಿರ ಹಮ್ಮಿಕೊಂಡು ಸೈ ಎನಿಸಿದ್ದಾರೆ.
ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಅಂಕ ತೆಗೆದುಕೊಳ್ಳಲು ನಿರಂತರ ಕಾರ್ಯಾಗಾರ ನಡೆಸುತ್ತಿದ್ದಾರೆ. ಸಾಮಾಜಿಕ ಪಿಡುಗು ನಿರ್ಮೂಲನೆ, ಕನ್ನಡ ಭಾಷಾ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿ, ಭಾಷಣ ಅಭಿಯಾನ ನಡೆಸುತ್ತಿದ್ದಾರೆ. ಇವರು ಶಿಕ್ಷಕರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದು, ವಿಜಯನಗರ ಜಿಲ್ಲೆಯ ಶಿಕ್ಷಕರಿಗೆ ಆರೋಗ್ಯ ತೊಂದರೆ ಆದರೆ, ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಇನ್ನೂ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೂ ಸಹಾಯ ಹಸ್ತ ಚಾಚುತ್ತಿದ್ದಾರೆ.ಶಿಕ್ಷಕ ಶಿವಾನಂದ ಬಿ.ಬಿ. ಸಹಿಪ್ರಾ ಶಾಲೆ ಸಿಡೇಗಲ್ಲು, ಹಿರೇ ಕುಂಬಳಕುಂಟೆ, ಆದರ್ಶ ವಿದ್ಯಾಲಯ, ಕೂಡ್ಲಿಗಿ, ಸರ್ಕಾರಿ ಪ್ರೌ ಶಾಲೆ ಗುಡೇಕೋಟೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬಳ್ಳಾರಿ ಮತ್ತು ಕೂಡ್ಲಿಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲೂ ಸೇವೆ ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಿದೆ. ಹಾಗಾಗಿ ನವೋದಯ, ಮೊರಾರ್ಜಿ, ಆದರ್ಶ ವಿದ್ಯಾಲಯ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸ್ವತಃ ಆಸಕ್ತಿ ವಹಿಸಿ ತರಬೇತು ನೀಡುತ್ತಿರುವೆ. ಅವರಿಗೆ ಸೀಟು ಲಭಿಸಿದರೆ, ಅದೇ ನನಗೆ ದೊರೆಯುವ ಗುರು ದಕ್ಷಿಣೆ ಎಂದು ಕೂಡ್ಲಿಗಿ ಶಿಕ್ಷಕ ಶಿವಾನಂದ ಬಿ.ಬಿ ತಿಳಿಸಿದ್ದಾರೆ.;Resize=(128,128))
;Resize=(128,128))