ಜಾತಿ ಜನಗಣತಿ ವೇಳೆ ಶಿಕ್ಷಕನಿಗೆ ಹೃದಯಾಘಾತ: ಸ್ಟೆಂಟ್‌ ಅಳವಡಿಕೆ

| Published : Oct 08 2025, 01:00 AM IST

ಜಾತಿ ಜನಗಣತಿ ವೇಳೆ ಶಿಕ್ಷಕನಿಗೆ ಹೃದಯಾಘಾತ: ಸ್ಟೆಂಟ್‌ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಜಾತಿ ಜನಗಣತಿ ಕರ್ತವ್ಯದಲ್ಲಿದ್ದ ವೇಳೆ ತಾಲೂಕಿನ ಹಳೇ ಕಡ್ಲೆಬಾಳು ಗ್ರಾಮದ ಸರ್ಕಾರಿ ಶಾಲೆ ಸಹಶಿಕ್ಷಕ ಶಿವಪ್ರಕಾಶ ನಾಯ್ಕ (44) ಹೃದಯಾಘಾತಕ್ಕೆ ಒಳಗಾದ ಘಟನೆ ಸೋಮವಾರ ಮಧ್ಯಾಹ್ನ ಗ್ರಾಮದಲ್ಲಿ ನಡೆದಿದೆ.

- ಹಳೇ ಕಡ್ಲೆಬಾಳು ಸರ್ಕಾರಿ ಶಾಲೆ ಸಹಶಿಕ್ಷಕ ಶಿವಪ್ರಕಾಶ ನಾಯ್ಕ ಚೇತರಿಕೆ

- - -- ದಾವಣಗೆರೆ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಿಂದ ಚಿಕಿತ್ಸೆ

- ಶಿವಪ್ರಕಾಶ ನಾಯ್ಕಗೆ ಮೊಬೈಲ್ ಕರೆ ಮಾಡಿ ಧೈರ್ಯ ಹೇಳಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಜಾತಿ ಜನಗಣತಿ ಕರ್ತವ್ಯದಲ್ಲಿದ್ದ ವೇಳೆ ತಾಲೂಕಿನ ಹಳೇ ಕಡ್ಲೆಬಾಳು ಗ್ರಾಮದ ಸರ್ಕಾರಿ ಶಾಲೆ ಸಹಶಿಕ್ಷಕ ಶಿವಪ್ರಕಾಶ ನಾಯ್ಕ (44) ಹೃದಯಾಘಾತಕ್ಕೆ ಒಳಗಾದ ಘಟನೆ ಸೋಮವಾರ ಮಧ್ಯಾಹ್ನ ಗ್ರಾಮದಲ್ಲಿ ನಡೆದಿದೆ.

ಹೃದಯಾಘಾತಕ್ಕೆ ಒಳಗಿ ಕುಸಿದುಬಿದ್ದ ಅವರನ್ನು ತಕ್ಷಣವೇ ಗ್ರಾಮಸ್ಥರು, ಸ್ಥಳೀಯರು ವಾಹನವೊಂದರಲ್ಲಿ ದಾವಣಗೆರೆ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಗೆ ಕರೆ ತಂದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಹೃದ್ರೋಗ ತಜ್ಞರು ಶಿವಪ್ರಕಾಶ ನಾಯ್ಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ, ಸ್ಟಂಟ್ ಹಾಕಿದರು. ಈಗ ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಶಿವಪ್ರಕಾಶ ನಾಯ್ಕ ಅಪಾಯದಿಂದ ಪಾರಾಗಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಎಚ್ಚರಗೊಂಡ ಶಿವಪ್ರಕಾಶ ನಾಯ್ಕ ಅವರಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮೊಬೈಲ್ ಕರೆ ಮಾಡಿ, ಧೈರ್ಯ ಹೇಳಿದ್ದಾರೆ.

ಸಮೀಕ್ಷೆ ವೇಳೆ ಆರ್‌ಆರ್‌ ನಂಬರ್‌ ಸಮಸ್ಯೆ, ಲೊಕೇಷನ್ ಗೊಂದಲ, ನೆಟ್‌ವರ್ಕ್ ಸಿಗದಿರುವುದು, ಸರ್ವರ್ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳ ಆಗರವೇ ಆಗಿರುವ ಜಾತಿಗಣತಿ ಕಾರ್ಯದ ಆರಂಭದಿಂದಲೂ ಗಣತಿ ಅಧಿಕಾರಿ, ಸಿಬ್ಬಂದಿ ತೀವ್ರ ಗೊಂದಲ, ಒತ್ತಡ, ಭಯದಲ್ಲೇ ಕಾರ್ಯನಿರ್ವಹಿಸುವ ಸ್ಥಿತಿ ಇದೆ. ಇಂತಿಷ್ಟು ಕುಟುಂಬಗಳದ್ದು ಸಮೀಕ್ಷೆ ಮಾಡಬೇಕೆಂಬ ಮೇಲಾಧಿಕಾರಿಗಳ ಫರ್ಮಾನು, ಅಮಾನತು, ಶಿಸ್ತು ಕ್ರಮ ಎಂಬೆಲ್ಲಾ ಹೆದರಿಕೆಯಿಂದಲೇ ಬಹುತೇಕ ಸಮೀಕ್ಷೆದಾರರು ಒತ್ತಡದಲ್ಲೇ ಕಾರ್ಯನಿರ್ವಹಿಸುವ ಸ್ಥಿತಿ ಇದೆ.

ಗಣತಿ ಕಾರ್ಯದ ಒತ್ತಡ ಮೈಮೇಲೆ ತಂದುಕೊಳ್ಳದ ಕೆಲವರು ಅನಧಿಕೃತ ವ್ಯಕ್ತಿಗಳಿಂದಲೂ ಗಣತಿ ಕಾರ್ಯ ಮಾಡಿಸಿದ್ದರೆ, ಮನೆ ಮನೆ ಅಲೆಯುತ್ತ, ಲೊಕೇಷನ್, ಆರ್‌ಆರ್‌ ನಂಬರ್ ಹುಡುಕಾಟದಲ್ಲೇ ಸಮಯ ವ್ಯರ್ಥವಾಗುತ್ತಿರುವುದು ಇನ್ನಿತರ ಸಮಸ್ಯೆಗಳ ಮಧ್ಯೆ ಹಗಲಿರುಳು ಸಮೀಕ್ಷಾ ಅಧಿಕಾರಿ, ಸಿಬ್ಬಂದಿ ಪರದಾಟ ಗಣತಿ ಮುಗಿಯುವವರೆಗೂ ಮುಂದುವರಿಯೋದು ಸ್ಪಷ್ಟವಾಗಿದೆ.

- - -

(ಬಾಕ್ಸ್‌)

* ಚಿಕಿತ್ಸಾ ವೆಚ್ಚ ಭರಿಸಲು ಆಯೋಗಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ

ದಾವಣಗೆರೆ: ಜಾತಿ ಜನಗಣತಿ ಸಮೀಕ್ಷೆ ವೇಳೆ ಹೃದಯಾಘಾತಕ್ಕೀಡಾಗಿ, ಶಸ್ತ್ರಚಿಕಿತ್ಸೆಗೆ ಒಳಗಾದ ತಾಲೂಕಿನ ಹಳೇ ಕಡ್ಲೇಬಾಳು ಗ್ರಾಮದ ಶಾಲಾ ಶಿಕ್ಷಕ ಶಿವಪ್ರಕಾಶ ನಾಯ್ಕ ಅವರ ಚಿಕಿತ್ಸಾ ವೆಚ್ಚ ಭರಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ಹಳೇ ಕಡ್ಲೆಬಾಳು ಗ್ರಾಮದಲ್ಲಿ ಜಾತಿ ಜನಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕ ಶಿವಪ್ರಕಾಶ ನಾಯ್ಕ ಎಂಬರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಗ್ರಾಮಸ್ಥರು, ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂಬ ವಿಚಾರ ಆಯೋಗದ ಗಮನಕ್ಕೆ ತಂದ ಹಿನ್ನೆಲೆ ಮೇಲಾಧಿಕಾರಿಗಳ ಹೇಳಿಕೆಯಂತೆ ಚಿಕಿತ್ಸಾ ವೆಚ್ಚ ಭರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಸಮೀಕ್ಷೆಗೆ ತೆರಳಿದ್ದ ವೇಳೆ ರಾಜ್ಯದ ವಿವಿಧೆಡೆ ಮೃತಪಟ್ಟ ಮೂವರ ಕುಟುಂಬ ವರ್ಗಕ್ಕೆ ತಲಾ ₹15 ಲಕ್ಷ ಪರಿಹಾರವನ್ನು ಆಯೋಗದಿಂದ ನೀಡಲಾಗುತ್ತದೆ ಎನ್ನಲಾಗಿದೆ. ಅಲ್ಲದೇ, ಗಣತಿ ಕಾರ್ಯದ ವೇಳೆ ಹೃದಯಾಘಾತ, ನಾಯಿಕಡಿತ ಕೇಸ್‌ಗಳು ವರದಿ ಆಗುತ್ತಿವೆ. ಈ ಬಗ್ಗೆಯೂ ಅ.8ರಂದು ಆಯೋಗದ ಸದಸ್ಯರು ಸಭೆ ಸೇರಿ, ಚರ್ಚಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

- - -

(** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ) -7ಕೆಡಿವಿಜಿ1: ದಾವಣಗೆರೆ ತಾಲೂಕಿನ ಹಳೇ ಕಡ್ಲೆಬಾಳು ಗ್ರಾಮದಲ್ಲಿ ಜಾತಿ ಜನಗಣತಿ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಶಾಲಾ ಶಿಕ್ಷಕ ಶಿವಪ್ರಕಾಶ ನಾಯ್ಕ ಅವರನ್ನು ಅಧಿಕಾರಿಗಳು, ಸಿಬ್ಬಂದಿ, ಸಹೋದ್ಯೋಗಿಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. -7ಕೆಡಿವಿಜಿ2: ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.