ಸಾರಾಂಶ
ಹಾವೇರಿ: ಸ್ಮಾರ್ಟ್ ಕ್ಲಾಸ್ ಮೂಲಕ ಪಾಠ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮೂಲಭೂತ ಪರಿಕಲ್ಪನೆ ಮೂಡಿಸುವುದು, ಗಣಕ ಗಣಿತ ಪರಿಕಲ್ಪನೆಯಿಂದ ಗಣಿತ ವಿಷಯದಲ್ಲಿ ಮಕ್ಕಳನ್ನು ಅಣಿಗೊಳಿಸುವ ಕಾರ್ಯದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮೈದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಿರುಕಪ್ಪ ಚನ್ನಪ್ಪ ಹ್ಯಾಡಲದ ಮಾದರಿಯಾಗಿದ್ದಾರೆ. ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸುವ ಚಿಂತನೆಯಿಂದ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕ ಹ್ಯಾಡಲದ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಸ್ಮಾರ್ಟ್ ಕ್ಲಾಸ್‌ನಲ್ಲಿ ಕಲಿಸಿಕೊಡಲಾಗುವ ಪಾಠಗಳನ್ನು ಪುನರ್ ಮನನ ಮಾಡಿ ಮಕ್ಕಳು ವಿಷಯ ಮನದಟ್ಟು ಮಾಡಿಕೊಳ್ಳುವಂತೆ ಮಾಡಿದ್ದಾರೆ. ಪಾಲಕರಿಗೆ ಫೋನ್: ಗಣಕ ಗಣಿತ ಪರಿಕಲ್ಪನೆಯಡಿ ಮಕ್ಕಳಿಗೆ ಮನೆಪಾಠಕ್ಕೆ ಕೊಟ್ಟಿರುವ ಲೆಕ್ಕಗಳನ್ನು ಸಮರ್ಪಕವಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪಾಲಕರಿಗೆ ಫೋನ್ ಮಾಡಿ ವಿಚಾರಿಸುತ್ತಾರೆ. ಇದರಲ್ಲಿ ಪಾಲಕರ ಪಾಲ್ಗೊಳ್ಳುವಿಕೆಯೂ ಕಡ್ಡಾಯವಾಗಿದೆ. ಮರುದಿನ ಶಾಲೆಗೆ ಬರುವ ವಿದ್ಯಾರ್ಥಿಗಳಿಂದ ಅವರು ಮನೆಪಾಠಕ್ಕೆ ಕೊಟ್ಟಿರುವ ವಿಷಯವನ್ನು ಪರಿಶೀಲಿಸಿ ತಪ್ಪುಗಳಾದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ಶೈಕ್ಷಣಿಕ ಮಟ್ಟ ಸುಧಾರಣೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಪಾಲಕರನ್ನು ಭೇಟಿ ಮಾಡಿ ಅವರ ಸ್ಥಿತಿಗತಿ ಪರಿಶೀಲನೆ ಮಾಡಲಾಗುತ್ತದೆ. ಅಂತಹ ಮಕ್ಕಳಿಗೆ ಪ್ರತ್ಯೇಕವಾಗಿ ಮೂಲಭೂತವಾದ ಪರಿಕಲ್ಪನೆ ಕೊಟ್ಟು ಮುಂದುವರಿದಿರುವ ಮಕ್ಕಳಂತೆ ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಮಾಡುವುದು. ಇದರಿಂದ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪೈಕಿ ಶೇ. 80ರಷ್ಟು ಮಕ್ಕಳು ಪ್ರಗತಿ ಸಾಧಿಸಿದ್ದಾರೆ.