ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ: ಪೋಷಕರ ಪ್ರತಿಭಟನೆ

| Published : Jan 13 2024, 01:31 AM IST

ಸಾರಾಂಶ

ಮಾಗಡಿ: ತಾಲೂಕಿನ ಮಾಗಡಿ-ಹುಲಿಯೂರುದುರ್ಗ ಮುಖ್ಯರಸ್ತೆಯಲ್ಲಿರುವ ವೆಂಕಟ್ ಇಂಟರ್ ನ್ಯಾಷನಲ್ ಶಾಲೆಯ ಗಣಿತ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ಪರಿಣಾಮ ವಿದ್ಯಾರ್ಥಿ ಕೈ ಮೂಳೆಗೆ ಗಂಭೀರ ಗಾಯವಾಗಿದ್ದು ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಲಾ ವಾಹನ ತಡೆದು ಪೋಷಕರು ಪ್ರತಿಭಟನೆ ನಡೆಸಿದರು.

ಮಾಗಡಿ: ತಾಲೂಕಿನ ಮಾಗಡಿ-ಹುಲಿಯೂರುದುರ್ಗ ಮುಖ್ಯರಸ್ತೆಯಲ್ಲಿರುವ ವೆಂಕಟ್ ಇಂಟರ್ ನ್ಯಾಷನಲ್ ಶಾಲೆಯ ಗಣಿತ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ಪರಿಣಾಮ ವಿದ್ಯಾರ್ಥಿ ಕೈ ಮೂಳೆಗೆ ಗಂಭೀರ ಗಾಯವಾಗಿದ್ದು ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಲಾ ವಾಹನ ತಡೆದು ಪೋಷಕರು ಪ್ರತಿಭಟನೆ ನಡೆಸಿದರು.

ತಾಲೂಕಿನ ದಂಡೆನಹಳ್ಳಿಯ ರಾಮಚಂದ್ರು ಪವಿತ್ರ ದಂಪತಿ ಪುತ್ರ 9ನೇ ತರಗತಿಯ ಅಭಿಷೇಕ್ ಗೌಡ ವೆಂಕಟ್ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಗಣಿತ ಶಿಕ್ಷಕ ಸೈಯದ್ ಮುಹಿನ್ ಗಣಿತ ಸೂತ್ರ ಹೇಳಿಲ್ಲ ಎಂದು ವಿದ್ಯಾರ್ಥಿಯ ಭುಜಕ್ಕೆ 14 ಬಾರಿ ಕಡ್ಡಿಯಿಂದ ಹೊಡೆದಿದ್ದರಿಂದ ಕೈ ಮೂಳೆಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಜೊತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಕೊಠಡಿಯಿಂದ ಹೊರಗೆ ನಿಲ್ಲಿಸಿ ವಿದ್ಯಾರ್ಥಿಗೆ ಕಠಿಣ ಶಿಕ್ಷೆ ನೀಡಲಾಗಿದೆ.

ಮುಖ್ಯ ಶಿಕ್ಷಕ ನಾಗೇಶ್ ರಾವ್ ವಿಷಯ ತಿಳಿದ ಕೂಡಲೇ ವಿದ್ಯಾರ್ಥಿಗೆ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿ ಪಟ್ಟಣದ ಹೊಸಪೇಟೆಯಲ್ಲಿ ಕೈಗೆ ಪಟ್ಟನ್ನು ಹಾಕಿಸಿ ಮನೆಗೆ ಕಳಿಸಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿಯನ್ನು ನೋಡಿ ಪೋಷಕರು ಗಾಬರಿಗೊಂಡು ಶಿಕ್ಷಕರ ಬಳಿ ಮಾಹಿತಿ ಕೇಳಿದ್ದಾರೆ. ಸರಿಯಾದ ಉತ್ತರ ನೀಡದ ಕಾರಣ ಶುಕ್ರವಾರ ಬೆಳಗ್ಗೆ ಶಾಲಾ ವಾಹನ ತಡೆದು ಶಿಕ್ಷಕ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದರು. ಎರಡು ಗಂಟೆಯಾದರೂ ಶಿಕ್ಷಕ ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಳೆದ ವಾರಷ್ಟೇ ಇದೇ ವಿದ್ಯಾರ್ಥಿ ಕಾಲಿಗೆ ಅದೇ ಗಣಿತ ಶಿಕ್ಷಕ ಬಲವಾಗಿ ಹೊಡೆದಿದ್ದರು. ಈಗ ಮತ್ತೊಮ್ಮೆ ಅದೇ ವಿದ್ಯಾರ್ಥಿಯನ್ನು ಗುರಿಯಾಗಿಟ್ಟುಕೊಂಡು ಥಳಿಸಿದ್ದಾರೆ. ತಡವಾಗಿ ಬಂದ ಮುಖ್ಯ ಶಿಕ್ಷಕ ಹಾಗೂ ಶಾಲಾಡಳಿತ ಮಂಡಳಿ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಚೆನ್ನಾಗಿ ಓದಲಿ ಅಂತ ಕಷ್ಟಪಟ್ಟು ಸಾವಿರಾರು ರು. ಶುಲ್ಕ ಕಟ್ಟಿ ಶಾಲೆಗೆ ಕಳಿಸಿದರೆ, ಶಿಕ್ಷಕರು ಮಕ್ಕಳನ್ನು ಹೀಗೆ ಹೊಡೆಯುವುದು ಸರಿಯಾ ಎಂದು ಪ್ರಶ್ನಿಸಿದರು. ಪೋಷಕರಿಗೂ ಮಾಹಿತಿ ನೀಡದಿದ್ದರೆ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡುವವರು ಯಾರು? ವಿದ್ಯಾರ್ಥಿ ತಪ್ಪು ಮಾಡಬಹುದು. ಅದಕ್ಕೆ ಇಂತಹ ಕಠಿಣ ಶಿಕ್ಷೆ ನೀಡಿದರೆ ಅವನ ಮುಂದಿನ ಭವಿಷ್ಯ ಏನಾಗುತ್ತದೆ ಎಂದು ಪೋಷಕರು ಶಾಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದ್ದು ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಪೋಷಕರು ತಿಳಿಸಿದ್ದಾರೆ.ಪೋಟೋ 12ಮಾಗಡಿ2 : ಕೈ ಮೂಳೆ ಮುರಿದುಕೊಂಡಿರುವ ವಿದ್ಯಾರ್ಥಿ ಅಭಿಷೇಕ್ ಗೌಡ.ಪೋಟೋ 12ಮಾಗಡಿ3 : ಮಾಗಡಿ ತಾಲೂಕಿನ ಚಿಕ್ಕಮುದ್ದಿಗೆರೆ ಗ್ರಾಮದ ವಿದ್ಯಾರ್ಥಿ ಕೈಗೆ ಗಾಯ ಮಾಡಿರುವ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಶಾಲಾ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿದರು.