ಸಾರಾಂಶ
ಧಾರವಾಡ:
ಗಣಿತ ವಿಷಯ ಭಿನ್ನವಾಗಿ ಕಲಿಸುವ ಮೂಲಕ ಸುಲಭವಾಗಿ ಬೋಧನೆ ಮಾಡಲು ಸಾಧ್ಯ ಎಂದು ನವದೆಹಲಿಯ ಎನ್‌ಸಿಆರ್‌ಟಿ ವಿಶ್ರಾಂತ ನಿರ್ದೇಶಕ ಜಿ. ರವೀಂದ್ರ ಹೇಳಿದರು.ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗವು ''''''''''''''''ಪ್ರಧಾನ ಮಂತ್ರಿ ಉಷಾ ಯೋಜನೆ'''''''''''''''' ಅಡಿಯಲ್ಲಿ ಕವಿವಿ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ಗಣಿತಶಾಸ್ತ್ರ ಪ್ರಾಧ್ಯಾಪಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿದ ಅವರು, ಗಣಿತ ಕಲಿಯಲು ವಿಷಯದ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು. ಭಾರತದಲ್ಲಿ ವೈದಿಕ ಕಾಲದಿಂದಲೂ ಹಲವಾರು ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿತ್ತು. ಅದರಲ್ಲಿ ಮುಖಾಮುಖಿ ಕಲಿಕೆಗೆ ಹೆಚ್ಚು ಮಹತ್ವವಿದೆ. ವಿದ್ಯಾರ್ಥಿಗಳ ಭಾವನೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದರು.
ಶಿಕ್ಷಕರು ಬೋಧನೆಯಲ್ಲಿ ಕ್ರಿಯಾಶೀಲತೆ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಗಣಿತವನ್ನು ವಿವಿಧ ಆಯಾಮಗಳಲ್ಲಿ ಬೋಧಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಹೆಚ್ಚು ಅನುಕೂಲ ಎಂದು ಹೇಳಿದರು.ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆ, ಎಲ್ಲ ರೀತಿಯಿಂದಲೂ ಜ್ಞಾನ ಸಂಪಾದಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರಯತ್ನಿಸಬೇಕು ಮತ್ತು ಪಠ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅಧ್ಯಯನ ಮಾಡಿ ಎಂದರು.
ಉಪ ಪ್ರಾಚಾರ್ಯ ಡಾ. ಸುರೇಶ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯತ್ತಿನ ಹಿತದೃಷ್ಟಿಯಿಂದ ಉದ್ಯಮ ಮತ್ತು ಉದ್ಯೋಗ ಮಾರುಕಟ್ಟೆ ಅನುಗುಣವಾಗಿ ಪಠ್ಯಕ್ರಮ ರೂಪಿಸಿ ಬೋಧಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕವಿವಿ ಗಣಿತಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ. ಎಸ್.ಸಿ. ಶಿರಾಳಶೆಟ್ಟಿ ಮಾತನಾಡಿದರು. ಎರಡು ದಿನಗಳ ಗಣಿತ ವಿಷಯದ ಪ್ರಾಧ್ಯಾಪಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಆರು ತಾಂತ್ರಿಕ ಗೋಷ್ಠಿಯಲ್ಲಿ ಸಿ-ಲ್ಯಾಬ್ ತಂತ್ರಾಂಶದ ಮೂಲಕ ಗಣಿತ ಕಲಿಕೆ ಎಂಬ ವಿಷಯದ ಮೇಲೆ ಪರಿಣತ ಪ್ರಾಧ್ಯಾಪಕರು ಮಾತನಾಡಿದರು.
ಪ್ರೊ. ಎಚ್.ಎಸ್. ರಾಮನೆ, ಪ್ರೊ. ಪಿ.ಜಿ. ಪಾಟೀಲ್, ಡಾ. ಎಂ.ಕೆ. ಭಟ್, ಕೃಷ್ಣ ಚೌಡರೆಡ್ಡಿ, ಡಾ.ಬಿ. ಪರ್ವತಲು, ಡಾ. ಶಶಿಕಾಂತ ಆಲೂರ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಶೋಧಕರು, ಕವಿವಿ ವ್ಯಾಪ್ತಿಯ ಗಣಿತಶಾಸ್ತ್ರ ಪ್ರಾಧ್ಯಾಪಕರು ಹಾಜರಿದ್ದರು.