ಶಿಕ್ಷಕರು ಸಮಾಜ, ದೇಶ ಕಾಯುವ ಸೈನಿಕರು

| Published : Dec 12 2024, 12:30 AM IST

ಸಾರಾಂಶ

ದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಶಿಕ್ಷಕರೆಂದರೆ ಸಮಾಜ ಕಾಯುವ ಸೈನಿಕರು, ದೇಶ ಕಟ್ಟುವ ಕಾರ್ಮಿಕರು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗದೇಶದ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಶಿಕ್ಷಕರೆಂದರೆ ಸಮಾಜ ಕಾಯುವ ಸೈನಿಕರು, ದೇಶ ಕಟ್ಟುವ ಕಾರ್ಮಿಕರು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ಹೇಳಿದರು.

ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ , ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಶಿಕ್ಷಕಿ ಕೆ. ಕಾಂತಮ್ಮ ಅವರ ಗುರುನಮನ ಸಮಾರಂಭದಲ್ಲಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ಕೆ. ಕಾಂತಮ್ಮ ಅವರು ವೃತ್ತಿ ಜೀವನದಲ್ಲಿ ಮಕ್ಕಳಿಗೆ ಉತ್ತಮ ಬೋಧನೆಯ ಜೊತೆಜೊತೆಗೆ ಸಂಸ್ಕಾರವಂತರಾಗಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್ ಮಾತನಾಡಿ, ಪ್ರಸ್ತುತ ಶಿಕ್ಷಣ ವಾಣಿಜ್ಯೀಕರಣವಾಗಿದ್ದು, ಗ್ರಾಮೀಣ ಭಾಗದ ಬಡವರಿಗೆ ಇನ್ನೂ ಮರಿಚಿಕೆಯಾಗಿದೆ. ದೇಶದಲ್ಲಿದ್ದ ಅನೇಕ ರಾಜಮನೆತನಗಳಲ್ಲಿ ಶೈಕ್ಷಣಿಕವಾಗಿ ಹೆಚ್ಚು ಅವಕಾಶ ಮತ್ತು ಪ್ರೋತ್ಸಾಹ ಕೊಟ್ಟಿದ್ದು ಮೈಸೂರು ಸಂಸ್ಥಾನ. ಅದರಲ್ಲೂ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ತಾಲೂಕು ಕಾರ್ಯದರ್ಶಿ ಸಿ.ಎನ್. ರೂಪಾ ಮಾತನಾಡಿ, ನಿವೃತ್ತ ಶಿಕ್ಷಕರನ್ನು ಗೌರವಿಸಿ ಗುರುನಮನ ಸಲ್ಲಿಸುವ ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಮತ್ತು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ ನ ಕಾರ್ಯ ಶ್ಲಾಘನೀಯ. ನಿವೃತ್ತರ ಅನುಭವ ಯುವ ಶಿಕ್ಷಕರಿಗೆ ಸಿಗಲಿ ಎಂದರು.

ಪ್ರಗತಿ ಗ್ರಾಮೀಣ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಸಿ.ಎಂ. ಬಸವರಾಜಯ್ಯ, ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಸದಸ್ಯೆ ಸುಶೀಲಾ ಉಪಸ್ಥಿತರಿದ್ದರು.