ಕನ್ನಡಪ್ರಭ ವಾರ್ತೆ ಬಾಗಲಕೋಟೆಶಿಕ್ಷಕರು ಸಮಾಜವದ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿಕ್ಷಕರು ಸಮಾಜವದ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.ನವನಗರದ ಕಲಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನವರ ಜನ್ಮದಿನವನ್ನು ಶಿಕ್ಷಣರ ದಿನವಾಗಿ ಆಚರಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಶಿಕ್ಷಕರು ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸುವ ಹಾಗೂ ಗೌರವಿಸುವ ದಿನ ಇದಾಗಿದೆ ಎಂದರು.ಜಿಲ್ಲೆಯಲ್ಲಿ 60 ಶಾಲೆಗಳನ್ನು ಪಬ್ಲಿಕ್ ಶಾಲೆಯ ಮಾದರಿಯಲ್ಲಿ ರೂಪಿಸಲು ಸಿಸಿಎಸ್ಆರ್ ಅನುದಾನಡಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಚಿಕಿತ್ಸೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ಪಾಸ್ ಯೋಜನೆ, ಶಾಲಾ ಸುಧಾರಣಾ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ ಪ್ರಾರಂಭಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 100 ಶಿಟುಗಳು ದೊರೆತಿದೆ. ಶಾಲೆಯ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ನೀಡಲಾಗುತ್ತಿದ್ದು, ಶಾಲಾ ದುರಸ್ಥಿ ಸೇರಿದಂತೆ ಇತರೆ ಕಾರ್ಯಗಳಿದ್ದಲ್ಲಿ ತಿಳಿಸಿದರೆ ಕ್ರಮವಹಿಸಲಾಗುವುದೆಂದು ತಿಳಿಸಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಶಿಕ್ಷಕರು ಪಠ್ಯ ಬೋಧನೆಯ ಜತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ಸಾಮಾಜಿಕ ಜವಾಬ್ದಾರಿ, ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.ಸಂಸದ ಗದ್ದಿಗೌಡರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು ಎಂದರು. ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ ಶಿಕ್ಷಕರ ಪರಿಶ್ರಮ ಮಾರ್ಗದರ್ಶನದಿಂದಲೇ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದರು. ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಜಿ.ಪಂ ಸಿಇಒ ಗಜಾನನ ಬಾಲೆ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ಕೂಡ ಪ್ರಾರಂಭಿಸಲಾಗಿದೆ. ಅಲ್ಲದೇ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶಾಲಾ ಸುರಕ್ಷಿತ ಅಭಿಯಾನವನ್ನು ಕೂಡಾ ಪ್ರಾರಂಭಿಸಲಾಗಿದೆ ಎಂದು ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 38 ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೇ ನಿವೃತ್ತಿ ಹೊಂದಿರು ಶಿಕ್ಷಕರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಇದರ ಜತೆಗೆ ಜಿಪಂ ಸಿಇಒ ಆಶಯದಂತೆ ನೀಡಲಾದ ಎಲೆಮರೆ ಕಾಯಿ ಪ್ರಶಸ್ತಿಗೆ ಆಯ್ಕೆಯಾದ 6 ಜನ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.ಶಾಸಕ ಉಮೇಶ ಮೇಟಿ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅನೀಲಕುಮಾರ ದಡ್ಡಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲರಜಾಕ ಬೇನೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್, ಶಾಲಾ ಶಿಕ್ಷಣ ಇಲಾಖೆಯ ಉಪನಿದೇರ್ಶಕ ಆರ್.ಎಸ್.ಸೀತಾರಾಮು, ತಹಶೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಒ ಸುಭಾಷ ಸಂಪಗಾವಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.