ಸಾರಾಂಶ
ಮಂಗಳೂರು: ಶಿಕ್ಷಕ ವೃತ್ತಿ ಶ್ರೇಷ್ಠ ಮಟ್ಟದ ಮತ್ತು ಗೌರವಾನ್ವಿತ ಸೇವಾ ವೃತ್ತಿಯಾಗಿದ್ದು, ಅವರು ಸಮಾಜದಲ್ಲಿ ವಿಶೇಷ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ಅವರ ತ್ಯಾಗ, ನಿಸ್ವಾರ್ಥ ಸೇವಾ ಮನೋಭಾವ, ಕರ್ತವ್ಯನಿಷ್ಠೆ ಮತ್ತು ಸಮಯಪ್ರಜ್ಞೆಯಿಂದ ಕೂಡಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಅಮೂಲ್ಯ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ದೇವದಾಸ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯು ನಗರದ ವುಡ್‌ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ಸೆ.2ರಂದು ಆಯೋಜಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮೌಲ್ಯಾಧಾರಿತ ಶಿಕ್ಷಣವನ್ನು ಧಾರೆಯೆರೆದು ಅವರ ಉಜ್ವಲ ಭವಿಷ್ಯ ಮತ್ತು ಶ್ರೇಷ್ಠ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯ ಅಮೂಲ್ಯ. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿಗಳು ಎಂದು ಅವರು ನುಡಿದರು.ಈ ಸಂದರ್ಭ ನಗರದ ಬಲ್ಮಠ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ಜಗದೀಶ್ ಬಾಳ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ಸಾಧನೆಯನ್ನು ಪರಿಗಣಿಸಿ ‘ಆದರ್ಶ ಶಿಕ್ಷಕ’ ಎಂದು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ಬಾಳ ರೋಟರಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಹಳೆ ವಿದ್ಯಾರ್ಥಿಗಳು ತಮಗೆ ಗೌರವ ಸಲ್ಲಿಸುತ್ತಿರುವುದೇ ಶ್ರೇಷ್ಠ ಸನ್ಮಾನ ಎಂದರು.ಶ್ರೀ ಕೃಷ್ಣಾಷ್ಟಮಿ ಉತ್ಸವದ ಅಂಗವಾಗಿ ಪುಟಾಣಿಗಳ ಕೃಷ್ಣವೇಷ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿ, ಶಿಕ್ಷಕರ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಕಾರ್ಯದರ್ಶಿ ವಿವೇಕ ರೈ ಮಾಸಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಅವಿನಾಶ್, ಅರ್ಜುನ್ ಪ್ರಕಾಶ್, ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್, ರೋಟರಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ರೈ ಇದ್ದರು. ಅರ್ವಿನ್ ಡಿಸೋಜ ವಂದಿಸಿದರು.