ಮಕ್ಕಳು ಬೆಳಗಲು ಶಿಕ್ಷಕರು ಕಾರಣ: ಶಾಸಕ ಭೀಮಣ್ಣ ನಾಯ್ಕ

| Published : Sep 06 2024, 01:06 AM IST

ಸಾರಾಂಶ

ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ರಾಷ್ಟ್ರದ ಸತ್ಪ್ರಜೆಯಾಗಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ಮಕ್ಕಳು ಬೆಳಗಲು ಶಿಕ್ಷಕರು ಕಾರಣರು. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡಿದ್ದು, ರಾಜ್ಯಮಟ್ಟದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಒಂದು ವಿಶೇಷ ಸ್ಥಾನವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಗುರುವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ, ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ನಂತರ ನಮ್ಮ ಮಕ್ಕಳು ಸಾಧನೆ ಮಾಡಿದ್ದಾರೆ ಎಂದು ಕೆಲವು ಹೊರ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಹೇಳಿದರೂ ಮೂಲ ಅಡಿಪಾಯ ಇಲ್ಲಿಯದ್ದೇ. ಇಲ್ಲಿನ ಶಿಕ್ಷಕರ ಅನುಪಮ ಸೇವೆ ಈ ಸಾಧನೆಗಳಿಗೆ ಕಾರಣವಾಗುತ್ತಿದೆ. ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ರಾಷ್ಟ್ರದ ಸತ್ಪ್ರಜೆಯಾಗಿಸಬೇಕು. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತೊಡಗಿಕೊಂಡ ಎಲ್ಲ ಶಿಕ್ಷಕರು ಪ್ರಶಸ್ತಿಗೆ ಅರ್ಹರು ಎಂದು ಹೇಳಿದರು.

ಸರ್ವಪಲ್ಲಿ ರಾಧಾಕೃಷ್ಣನ್ ಮೊಮ್ಮಗ ಸುಬ್ರಹ್ಮಣ್ಯ ಶರ್ಮಾ ಮಾತನಾಡಿ, ಪ್ರತಿ ದಿನವೂ ಶಿಕ್ಷಕರ ದಿನ. ರಾಧಾಕೃಷ್ಣನ್ ಅವರ ಜನುಮ ದಿನದಂದು ಶಿಕ್ಷಕರ ಜತೆ ದಿನ ಆಚರಿಸಿಕೊಳ್ಳುವುದು ಭಾಗ್ಯ. ಶಿಕ್ಷಕರು ನಿಜವಾಗಿ ನಾಡಿನ ಭವಿಷ್ಯ ನಿರ್ಮಾಣ ಮಾಡುವವರು ಎಂದರು.

ಪ್ರೌಢಶಾಲಾ ವಿಭಾಗದಲ್ಲಿ ಹುಲೇಕಲ್ ಶ್ರೀದೇವಿ ಸಂಸ್ಥೆಯ ಜಿ.ಯು. ಹೆಗಡೆ, ಸಿದ್ದಾಪುರ ಬಿಳಗಿಯ ವಿನೋದಾ ಭಟ್ಟ, ಯಲ್ಲಾಪುರದ ನಾರಾಯಣ ನಾಯ್ಕ, ಮುಂಡಗೋಡ ಮಳಗಿಯ ಪೂರ್ಣಿಮಾ ಗೌಡ, ಹಳಿಯಾಳ ಸಾತ್ನಳ್ಳಿಯ ಶ್ರೀಶೈಲಾ ಹುಲ್ಲೆನ್ನನವರ್, ಜೊಯ್ಡಾ ಜಗಲಪೇಟೆಯ ಗಿರೀಶ ಕೋಟೆಮನೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ನೈಗಾರ ಶಾಲೆಯ ಸುರೇಶ ನಾಯ್ಕ, ಸಿದ್ದಾಪುರ ಹುಲಕುತ್ರಿಯ ದರ್ಶನ್ ಹರಿಕಾಂತ, ಯಲ್ಲಾಪುರ ಇಡಗುಂದಿಯ ರಾಮಚಂದ್ರ ಗೌಡ, ಮುಂಡಗೋಡ ನ್ಯಾಸರ್ಗಿಯ ಸಿದ್ದಲಿಂಗಪ್ಪ ಹೊಸಮನಿ, ಹಳಿಯಾಳ ಸಾತ್ನಳ್ಳಿಯ ಪುಂಡಲೀಕ ಸುನಕಾರ, ಜೊಯ್ಡಾದ ಗೌಡಸಾಡದ ಹಮನಪ್ಪ ಹರಿಜನ, ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ಹೆಬ್ಬಳ್ಳಿಯ ರಮಾ ನಾಯ್ಕ, ಸಿದ್ದಾಪುರ ಕೊಡ್ತಗಣಿಯ ಅನುರಾಧಾ ಮಡಿವಾಳ, ಯಲ್ಲಾಪುರ ಬೈಲಂದೂರಿನ ನಾರಾಯಣ ಕಾಂಬಳೆ, ಮುಂಡಗೋಡ ಕಲಕೊಪ್ಪದ ಅಶ್ವಿನಿ ಹೆಗಡೆ, ಹಳಿಯಾಳ ನವಗ್ರಾಮದ ವಿಶ್ವನಾಥ ಡಿ., ಜೊಯ್ಡಾ ಕಾಮಶೇತವಾಡದ ವಿಮಲ ನಾಯ್ಕ ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸುಬ್ರಹ್ಮಣ್ಯ ಶರ್ಮಾ ಅವರನ್ನು ಹಾಗೂ ಕಳೆದ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕ ನಾರಾಯಣ ಭಾಗ್ವತ್ ಅವರನ್ನು ಶಾಸಕ ಭೀಮಣ್ಣ ನಾಯ್ಕ ಸನ್ಮಾನಿಸಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಶರ್ಮಿಲಾ ಮಾದನಗೇರಿ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯರಾಣಿ, ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ತಾಪಂ ಇಒ ಸತೀಶ ಹೆಗಡೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಬಿಇಒ ನಾಗರಾಜ ನಾಯ್ಕ, ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ, ನಾರಾಯಣ ನಾಯ್ಕ, ಪಂಚಾಕ್ಷರಯ್ಯ ಸಾಗರ, ನಾರಾಯಣ ದಾಯಿಮನೆ, ಅಜಯ ನಾಯ್ಕ, ಸದಾನಂದ ಸ್ವಾಮಿ, ಲೀನಾ ನಾಯ್ಕ, ಕಿರಣ ನಾಯ್ಕ ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕಾ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜ ಸ್ವಾಗತಿಸಿದರು.