ಶಿಕ್ಷಕರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಕೆ.ಎನ್‌. ಬಸಂತ್‌

| Published : Aug 29 2025, 01:00 AM IST

ಶಿಕ್ಷಕರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಕೆ.ಎನ್‌. ಬಸಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಮಾಜಕ್ಕೆ ಕೆ.ಎಸ್. ಮಧುಸೂದನ್ ಅವರಂತಹ ನುರಿತ ಮತ್ತು ಉತ್ತಮ ಶಿಕ್ಷಕರ ಅವಶ್ಯಕತೆ ಅತ್ಯಂತ ಅಗತ್ಯವಾಗಿದ್ದು, ಇಂತಹವರಿಂದ ಉತ್ತಮ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಆಡಳಿತಗಾರರು ಸಮಾಜಕ್ಕೆ ಕೊಡುಗೆಯಾಗಿ ಬರಲಿದ್ದು, ನಾವೆಲ್ಲರೂ ಇವರ ಬೆನ್ನೆಲುಬಾಗಿ ನಿಲ್ಲಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು ಅದನ್ನು ನಿರ್ವಹಣೆ ಮಾಡುವವರು ಅಕ್ಕರೆಯಿಂದ ಒಪ್ಪಿ, ಅಪ್ಪಿಕೊಂಡು ಮುನ್ನಡೆದಾಗ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.

ಪಟ್ಟಣದ ಬನ್ನಿಮಂಟಪ ಬಡಾವಣೆಯಲ್ಲಿ 2025ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಕೆ.ಎಸ್. ಮಧುಸೂದನ್ ಅವರಿಗೆ ಸಮಾನ ಮನಸ್ಕರು ಮತ್ತು ಶಿಕ್ಷಣ ಪ್ರೇಮಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾಗಿರುವ ಇವರಿಗೆ ಸಂಧಿಸುವ ಗೌರವ ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದರು.

ಪ್ರಸ್ತುತ ಸಮಾಜಕ್ಕೆ ಕೆ.ಎಸ್. ಮಧುಸೂದನ್ ಅವರಂತಹ ನುರಿತ ಮತ್ತು ಉತ್ತಮ ಶಿಕ್ಷಕರ ಅವಶ್ಯಕತೆ ಅತ್ಯಂತ ಅಗತ್ಯವಾಗಿದ್ದು, ಇಂತಹವರಿಂದ ಉತ್ತಮ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಆಡಳಿತಗಾರರು ಸಮಾಜಕ್ಕೆ ಕೊಡುಗೆಯಾಗಿ ಬರಲಿದ್ದು, ನಾವೆಲ್ಲರೂ ಇವರ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕೆ.ಎಸ್. ಮಧುಸೂದನ್ ಈ ಬಾರಿ ರಾಷ್ಟ್ರೀಯ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿದ್ದು, ರಾಜ್ಯದಿಂದ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಏಕೈಕ ಶಿಕ್ಷಕರಾಗಿರುವುದು ಸಂತಸದ ವಿಚಾರ ಎಂದರಲ್ಲದೆ, ಇತರ ಶಿಕ್ಷಕ ಬಾಂಧವರು ಇವರನ್ನು ಅನುಸರಿಸಿ ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಸಾಲಿಗ್ರಾಮ ತಾಲೂಕಿನ ಕೆಡಗ ಗ್ರಾಮದವರಾದ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಮಧುಸೂದನ್ ಭೋದನೆಯ ಜತೆಗೆ ತಮ್ಮ ವಿಭಿನ್ನ ಪ್ರಯತ್ನಗಳ ಮೂಲಕ ವಿಶೇಷ ಶಿಕ್ಷಣ ನೀಡಿ, ಶೈಕ್ಷಣಿಕ ವಲಯಕ್ಕೆ ಮಾದರಿಯಾಗಿದ್ದು, ಪಾಠದ ಜತೆಗೆ ಸ್ವಂತ ಹಣವನ್ನು ವ್ಯಯಿಸಿ ಶಾಲೆಯಲ್ಲಿ ವಿಶೇಷ ಕೊಠಡಿ ನಿರ್ಮಾಣ ಮಾಡಿದ್ದು, ಅನುಭವಾತ್ಮಕ ಶಿಕ್ಷಣ ನೀಡುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ ಎಂದು ಹೇಳಿದರು.

ಕೆ.ಎಸ್. ಮಧುಸೂದನ್ ಅವರನ್ನು ಸಮಾನ ಮನಸ್ಕರು ಮತ್ತು ಶಿಕ್ಷಣ ಪ್ರೇಮಿಗಳು ಸನ್ಮಾನಿಸಿದರು.

ಪುರಸಭೆ ಸದಸ್ಯ ಕೆ.ಎಲ್. ಜಗದೀಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಉಪನ್ಯಾಸಕ ಎಚ್.ಡಿ. ರಾಘವೇಂದ್ರ, ಸಿಆರ್‌.ಪಿಗಳಾದ ವಿ. ಲೋಕೇಶ್, ಗಿರೀಶ್, ಶಿಕ್ಷಕರಾದ ಜಲೇಂದ್ರ, ಮಧುಕುಮಾರ್, ಬಡಾವಣೆಯ ನಿವಾಸಿಗಳಾದ ಎಸ್.ಎನ್. ಚಂದ್ರಶೇಖರ್, ಶ್ರೀನಿವಾಸಶೆಟ್ಟಿ, ನಾಗರಾಜು, ಚೆಲುವರಾಜು, ಧರ್ಮೇಶ್, ಕೆ.ಸಿ. ನಾಗರಾಜು, ಶ್ರೀನಿವಾಸ್, ಸತ್ಯನಾರಾಯಣ ಇದ್ದರು.