ಸಾರಾಂಶ
ಎಂ. ಪ್ರಹ್ಲಾದ್ ಕನಕಗಿರಿ
ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಬಸರಿಹಾಳ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರು ತರಗತಿ ತೊರೆದಿದ್ದು, ಶಾಲೆಯಲ್ಲೇ ತಂಪಾದ ಪ್ರದೇಶಗಳತ್ತ ಮುಖ ಮಾಡಿದ್ದಾರೆ.ಕಳೆದ ವಾರದಿಂದ ಬಿಸಿಲಿನ ಝಳಕ್ಕೆ ಮೇಲ್ಚಾವಣಿಗಳು ಬೆಂಕಿಯಂತಾಗಿದ್ದರಿಂದ ಪಾಠ ಬೋಧನೆಗೆ ತೊಂದರೆಯಾಗಿದೆ. ತರಗತಿಯೊಳಗೆ ಹೆಜ್ಜೆ ಹಾಕಿದರೆ ಸಾಕು ವಿಪರಿತ ಸೆಕೆ, ತಾಪಕ್ಕೆ ಶಿಕ್ಷಕರು ಮತ್ತು ಮಕ್ಕಳು ಬೆದರಿದ್ದು, ಶಿಕ್ಷಕರು ಶಾಲೆಯ ಹೊರಾಂಗಣವನ್ನೇ ಶೈಕ್ಷಣಿಕ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.
ಬಿಸಿಲಿನ ಬೇಗೆ ತಾಳದೆ ಶಿಕ್ಷಕರು ಹೊರಾಂಗಣವನ್ನು ಬೋಧನಾ ಕೊಠಡಿಗಳನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಆಯಾ ತರಗತಿಗಳ ಶಿಕ್ಷಕರು ಈಗಾಗಲೇ ಹೊರಾಂಗಣದ ಕಟ್ಟೆಯ ಮೇಲೆ ಟೇಬಲ್, ಚೇರ್ ಇಟ್ಟುಕೊಂಡು ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದ್ದಾರೆ. ಜತೆಗೆ ಮಕ್ಕಳನ್ನು ಬಿಸಿಲಿನಲ್ಲಿ ಆಟವಾಡದಂತೆ ಮುಂಜಾಗೃತೆ ವಹಿಸಿದ್ದಾರೆ.ಸಮಯ ಬದಲಾವಣೆ ಮಾಡಿ:
ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ಏರಿಕೆಯಾಗುವ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಕಲಬುರ್ಗಿ ವಿಭಾಗದ ಬೀದರ, ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಶಾಲಾ-ಕಾಲೇಜುಗಳ ಸಮಯ ಬದಲಾವಣೆಗೆ ಪ್ರಾದೇಶಿಕ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಏ. ೧ರಂದು ಪತ್ರ ಬರೆದಿದ್ದು, ಇನ್ನೇನು ವಾರದೊಳಗೆ ಕಲ್ಯಾಣ ಕರ್ನಾಟಕದ ಶಾಲಾ-ಕಾಲೇಜುಗಳ ಸಮಯವೂ ಬದಲಾವಣೆಯಾಗಲಿದೆ.ಬಿಸಿಲಿಗೆ ಶಾಲಾ ಕಟ್ಟಡದ ಮೇಲ್ಚಾವಣಿಗಳು ಬೆಂಕಿಯಂತೆ ಕಾಯುತ್ತಿದ್ದರಿಂದ ಕೊಠಡಿಗಳಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ. ಬಿಸಿಲು ಮತ್ತು ಸೆಕೆಯಿಂದ ಶಿಕ್ಷಕರು ಹೆದರುತ್ತಿದ್ದಾರೆ. ಇದರಿಂದ ಶಾಲೆಯ ತಂಪಾದ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಮಾಡುತ್ತಿದ್ದೇವೆ. ಸಮಯ ಬದಲಾವಣೆಯಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಪ್ರಭಾರಿ ಮುಖ್ಯಶಿಕ್ಷಕ ನಾಗಪ್ಪ ಹೊಸ್ಮನಿ ಹೇಳಿದ್ದಾರೆ.ಮಕ್ಕಳ ಕಲಿಕೆಗೆ ಸಮಸ್ಯೆಯಾಗಬಾರದೆಂದು ಕೆಲ ಶಾಲೆಗಳ ಶಿಕ್ಷಕರು ತಂಪಾದ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆ ಮಾಡುತ್ತಿದ್ದಾರೆ. ಸಮಯ ಬದಲಾವಣೆಗೆ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು, ಆದೇಶ ಬಂದ ಬಳಿಕ ಸಮಯ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಬಿಇಒ ನಟೇಶ ತಿಳಿಸಿದ್ದಾರೆ.