ಹೊಸಪೇಟೆ: ದೇಶದ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕೊಡುಗೆ ಅಪಾರವಿದೆ ಎಂದು ಚಿತ್ರದುರ್ಗದ ಸಿಟಿಇ ಪ್ರಾಚಾರ್ಯ, ಸಹ ನಿರ್ದೇಶಕಿ ಎ.ಹನುಮಕ್ಕ ಹೇಳಿದರು.ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸ್ನೇಹ ಬಳಗ ಹೊಸಪೇಟೆ, ರಾಜ್ಯ ಸರ್ಕಾರಿ ನೌಕರರ ಸಂಘದ ವಿಜಯನಗರ ಜಿಲ್ಲೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊಸಪೇಟೆ, ಕಸಾಪ ಸಹಯೋಗದಲ್ಲಿ ಇತ್ತೀಚಿಗೆ ಡಾಕ್ಟರೇಟ್ ಪದವಿ ಪಡೆದ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಡಾ.ಬಸವರಾಜ ಕೆ. ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಿಗೆ ಜ್ಞಾನ ಧಾರೆ ಎರೆಯಲು ತಮ್ಮೊಳಗೆ ಅಪಾರ ಜ್ಞಾನ ಸಂಪತ್ತು ಹೊಂದಿರಬೇಕು. ಅಪಾರ ಜ್ಞಾನ ಹೊಂದಲು ಉನ್ನತ ಶಿಕ್ಷಣ ಪಡೆಯುವುದು ಶಿಕ್ಷಕರಿಗೆ ಅತೀ ಅವಶ್ಯವಾಗಿದೆ ಎಂದರು.

ಡಾ.ಬಸವರಾಜ ಕೆ. ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದರ ಜೊತೆಗೆ ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಒಬ್ಬ ಶಿಕ್ಷಕರು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗೆ ಶಿಕ್ಷಕರು ನಿಂತ ನೀರಾಗದೆ ವೃತ್ತಿಯಲ್ಲಿ ಕ್ರಿಯಾಶೀಲರಾಗಿರಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಉಪನಿರ್ದೇಶಕ ವೆಂಕಟೇಶ ರಾಮಚಂದ್ರಪ್ಪ ಮಾತನಾಡಿ, ಮಕ್ಕಳ ಕಲಿಕೆಯ ಬುನಾದಿ ಎಂದರೆ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಶಾಲಾ ಶಿಕ್ಷಕರು ಹೇಗೆ ಮಕ್ಕಳಲ್ಲಿ ಜ್ಞಾನದ ಬೀಜ ಬಿತ್ತುತ್ತಾರೋ ಅದೇ ರೀತಿ ಮಕ್ಕಳು ಉತ್ತಮ ಸತ್‌ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಹಾಗಾಗಿ ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ ಡಾ. ಬಸವರಾಜ ಅವರೇ ಸಾಕ್ಷಿಯಾಗಿದ್ದಾರೆ. ಇದೇ ರೀತಿ ಪ್ರೇರಣೆಗೊಂಡು ಉನ್ನತ ವ್ಯಾಸಂಗದಲ್ಲಿ ಶಿಕ್ಷಕರು ತೊಡಗಬೇಕು ಎಂದು ಅವರು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಮಾತನಾಡಿ, ಶಿಕ್ಷಕರು ಕೇವಲ ಬೋದನೆಗಷ್ಠೆ ಸೀಮಿತಗೊಳ್ಳದೆ, ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು. ದಿನಕ್ಕೆ ಕನಿಷ್ಠ ಒಂದು ಪುಟವಾದರು ಸೃಜನ ಶೀಲ ಬರವಣಿಗೆಯಲ್ಲಿ ತೊಡಗಿಕೊಂಡಾಗ ನಮ್ಮೊಳಗಿನ ಜ್ಞಾನ ಉದ್ದೀಪನಗೊಳ್ಳುತ್ತದೆ ಎಂದು ಅವರು ಹೇಳಿದರು.


ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಮಲ್ಲಿಕಾರ್ಜುನ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವರಾಜ ಕೆ. ಶಿಕ್ಷಕ ವೃತ್ತಿಯ ಜೊತೆಗೆ ಡಾಕ್ಟರೇಟ್ ಪದವಿ ಪಡೆದಿದ್ದರು. ಇವರ ಸಂಘಟನೆಯ ಚಾತುರ್ಯವನ್ನು ನೋಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನಾಮ ನಿರ್ದೇಶನಗೊಳಿಸಿರುವುದು ಸಂತಷವಾಗಿದೆ ಎಂದು ಹೇಳಿದರು.

ಹಿರಿಯ ಉಪನ್ಯಾಸಕ ಎಲ್.ಡಿ. ಜೋಷಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚನ್ನಬಸಪ್ಪ, ಪಿ. ಸುನಂದ, ಸಂಘದ ಪದಾಧಿಕಾರಿಗಳಾದ ಕೆ. ಮಲ್ಲೇಶಪ್ಪ, ಎಸ್. ಬಸವರಾಜ, ಕೆ. ಮಾರ್ಗದಪ್ಪ, ಆರ್. ಸುಧಾದೇವಿ, ವರಪ್ರಸಾದ್, ಕ.ಸಾ.ಪ. ಅಧ್ಯಕ್ಷ ಗುಂಡಿ ಮಾರುತಿ, ಮಲಿಯಪ್ಪ ಇದ್ದರು.

ಶಿಕ್ಷಕರಾದ ದಿವಾಕರ ನಾರಾಯಣ ಸ್ವಾಗತಿಸಿದರು. ಪ್ರಕಾಶ ವಂದಿಸಿದರು. ಪ್ರದೀಪಕುಮಾರ್ ನಿರೂಪಿಸಿದರು.