ಸಾರಾಂಶ
ಶಿಕ್ಷಕರು ನೌಕರಿ ಎಂದು ಭಾವಿಸಿದರೆ ಸೇವೆ ಎಂಬುದು ಅರ್ಥ ಕಳೆದುಕೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ಆತ್ಮವಿಮರ್ಶೆ ಮಾಡಿಕೊಂಡು ಸಾಗಬೇಕಿದೆ.
ಕಾರಟಗಿ:
ಐಎಎಸ್, ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಮಹಾನ್ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿದ ಶಿಕ್ಷಕರು ಉತ್ತಮ ಪ್ರಜೆಗಳನ್ನು ಸೃಷ್ಟಿಸಬೇಕೆಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಹೇಳಿದರು.ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಹಾಗೂ ಸೇವಾ ನಿವೃತ್ತ ಪ್ರಾಚಾರ್ಯ ಅನಿಲಕುಮಾರ ಜಿ. ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ನೌಕರಿ ಎಂದು ಭಾವಿಸಿದರೆ ಸೇವೆ ಎಂಬುದು ಅರ್ಥ ಕಳೆದುಕೊಳ್ಳುತ್ತದೆ ಈ ಹಿನ್ನೆಲೆಯಲ್ಲಿ ಆತ್ಮವಿಮರ್ಶೆ ಮಾಡಿಕೊಂಡು ಸಾಗಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಸದಸ್ಯ ಸೋಮಶೇಖರ ಬೇರಗಿ, ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು ಎಲ್ಲ ಕ್ಷೇತ್ರ ಬೆಳೆಸುವ ಗಾರುಡಿಗರನ್ನು ಸೃಷ್ಟಿಸುತ್ತಾರೆ. ಶಿಕ್ಷಕ ವೃತ್ತಿ ಸಾಮಾಜಿಕ ಬದಲಾವಣೆ ತರುವ ಹುದ್ದೆಯಾಗಿದೆ. ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಇಂದು ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸುವುದು ಬೋಧಕರ ಜವಾಬ್ದಾರಿಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ನಾಗರಾಜ, ಸೇವಾ ನಿವೃತ್ತ ಅನಿಲಕುಮಾರ ಅವರು ತಮ್ಮ ಅವಧಿಯಲ್ಲಿ ಕಾಲೇಜಿನ ಮೂಲ ಸೌಕರ್ಯ ಕೊರತೆಗಳ ಬೇಡಿಕೆಗೆ ಸ್ಪಂದಿಸಿ ಕಾಲೇಜಿನ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಸೇವಾ ನಿವೃತ್ತ ಪ್ರಾಚಾರ್ಯ ಅನಿಲ್‌ಕುಮಾರ ಜಿ., ಇದೊಂದು ಭಾವನಾತ್ಮಕ ಬೇಸುಗೆ. ಸೇವಾ ದಿನಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಬೆಂಬಲ ನೀಡಿದ್ದು ಅವರ ಪ್ರೀತಿಯ ಭಾವನೆಗೆ ಚಿರಋಣಿಯಾಗಿದ್ದಾನೆ ಎಂದರು.ಇದಕ್ಕೂ ಮುಂಚೆ ಕೆಪಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶೇಖರಯ್ಯ, ಸಂಗಮೇಶ ಡಿ, ಮೆಹೆಬೂಬ್ ಹುಸೇನ್, ಮಹಾಬಳೇಶ್ವರ ವಿಶ್ವಕರ್ಮ, ಸಿಆರ್‌ಪಿ ತಿಮ್ಮಣ್ಣ ನಾಯಕ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.