ಸಾರಾಂಶ
ಕುಂದಾಪುರ: ಬದುಕಿನಲ್ಲಿ ನಮಗೆ ಹೆತ್ತ ತಾಯಿಯೇ ಮೊದಲ ಗುರು. ಬಳಿಕ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಬ್ರಹ್ಮ ಜಗತ್ತನ್ನು ಸೃಷ್ಟಿಸುತ್ತಾನೆ. ನಂತರ ಗುರುವೆಂಬ ಪರಬ್ರಹ್ಮ ಮಕ್ಕಳ ಬದುಕಿಗೆ ದೀವಿಗೆಯಾಗುತ್ತಾನೆ ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಎಸ್. ಭಂಡಾರಿ ಹೇಳಿದ್ದಾರೆ.ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಮಾಜವನ್ನು ತಿದ್ದುವವರು ಶಿಕ್ಷಕರು. ತಾವು ಕಲಿಸಿದ ವಿದಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಹೆತ್ತವರಿಗಿಂತ ಹೆಚ್ಚು ಖುಷಿ ಪಡುವವರು ಶಿಕ್ಷಕರೇ ಆಗಿರುತ್ತಾರೆ ಎಂದರು.ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಯಾವುದೇ ವ್ಯಕ್ತಿಯು ಸನ್ಮಾರ್ಗದಲ್ಲಿ ಸಾಗಬೇಕಾದರೆ ಒಬ್ಬ ಗುರುವಿನ ಮಾರ್ಗದರ್ಶನ ಅಗತ್ಯ. ಹಾಗೆಯೇ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಇವತ್ತಿನ ದಿನಗಳಲ್ಲಿ ಈ ಗುರು-ಶಿಷ್ಯರ ಬಾಂಧವ್ಯದಲ್ಲಿ ಕೊರತೆ ಕಂಡುಬರುತ್ತಿದ್ದು, ಇದು ಬೆಳೆಯಲು ಆಸ್ಪದ ನೀಡಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ದೇಶ ಕಟ್ಟುವ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ಉನ್ನತ ಗೌರವಾದರಗಳಿವೆ. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಉಪಸ್ಥಿತರಿದ್ದರು. ರಜತ್ ಭಟ್ ನಿರೂಪಿಸಿದರು.
ಸೇನಾ ನಿಧಿಗೆ ಕೊಡುಗೆಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಯು ವೈದ್ಯಕೀಯ ಅಥವಾ ಐಐಟಿ ಸೀಟು ಪಡೆದ ಸಂದರ್ಭದಲ್ಲಿ, ಸಂಸ್ಥೆಯ ವತಿಯಿಂದ ಪ್ರತಿ ವಿದ್ಯಾರ್ಥಿಯ ಪರವಾಗಿ 5,000 ರು.ನಂತೆ ಭಾರತೀಯ ಸೇನಾ ನಿಧಿಗೆ ಕೊಡುಗೆ ನೀಡಲಾಗುವುದು. ಇದು ದೇಶ ರಕ್ಷಕರಿಗೆ ನಮ್ಮ ಸಂಸ್ಥೆಯ ಸಣ್ಣ ಕೊಡುಗೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಘೋಷಿಸಿದರು.ಆರ್ಥಿಕ ಸಹಾಯ:
ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಅಗಲಿದ ಸಂಸ್ಥೆಯ ಶಿಕ್ಷಕ ಸಂತೋಷ್ ಕುಟುಂಬಕ್ಕೆ ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಆಡಳಿತ ಮಂಡಳಿ, ಮೃತರ ಪತ್ನಿ ಜಯಶ್ರೀ ಅವರ ಹೆಸರಿನಲ್ಲಿ 10 ಲಕ್ಷ ರು. ಠೇವಣಿ ಇಟ್ಟು ಆರ್ಥಿಕ ಸಹಾಯ ನೀಡಿ ಹೃದಯ ವೈಶಾಲ್ಯತೆ ಮೆರೆಯಿತು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಒಗ್ಗೂಡಿ ಈ ಮೊತ್ತ ಸಂಗ್ರಹಿಸಿ ಹಸ್ತಾಂತರಿಸಿದ್ದಾರೆ.