ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಮಕ್ಕಳ ಕೌಶಲ್ಯಗಳ ಬಗ್ಗೆ ಶಿಕ್ಷಕರು ಹೆಚ್ಚು ಗಮನ ನೀಡಬೇಕೆಂದು ಬೇಲೂರು ತಹಸೀಲ್ದಾರ್ ಮಮತಾ ತಿಳಿಸಿದರು.ಹಳೇಬೀಡಿನ ಕಲ್ಪತರು ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಕಲ್ಪತರು- ನೃತ್ಯ- ತರಂಗದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಏಕೆಂದರೆ ಹಿಂದಿನ ಕಾಲದಲ್ಲಿ ಶಿಕ್ಷಣ ಬೇಕು ಎಂದರೆ ದೂರದ ಊರಿಗೆ ಹೋಗಬೇಕಿತ್ತು. ಆದರೆ ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ. ಅದನ್ನು ಉಪಯೋಗಿಸಿಕೊಂಡು ಒಳ್ಳೆಯ ಗುಣಮಟ್ಟದ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೆ ಹೋಗಬೇಕು. ಇಂದಿನ ಸಮಾಜದಲ್ಲಿ ಶಿಕ್ಷಕರ ವೃತ್ತಿ ತುಂಬಾ ಒಳ್ಳೆಯ ಸ್ಥಾನ ನೀಡಬೇಕು. ಒಂದು ಮಗುವಿಗೆ ವಿದ್ಯಾಭ್ಯಾಸ ನೀಡಿ, ಒಳ್ಳೆಯ ಸಂಸ್ಕಾರ ನೀಡಿ, ಒಳ್ಳೆಯ ಸ್ಥಾನಕ್ಕೆ ಕೊಂಡೊಯ್ಯುವ ಏಕೈಕ ವ್ಯಕ್ತಿ ಎಂದರೆ ಶಿಕ್ಷಕರು. ಈ ಶಿಕ್ಷಕರಿಗೆ ಹೆಚ್ಚು ಗೌರವ ನೀಡಬೇಕು ಎಂದು ತಿಳಿಸಿದರು. ನಿವೃತ್ತ ಮುಖ್ಯೋಪಾಧ್ಯಾಯನಿ ಶಿವಗಂಗಮ್ಮ ಕಾರ್ಯಕ್ರಮದಲ್ಲಿ ಕಲ್ಪಶ್ರೀ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡುತ್ತಾ, ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಗೂಗಲ್‌ನಲ್ಲಿ ಎಲ್ಲವನ್ನು ನೋಡಿ ಅಭ್ಯಾಸ ಮಾಡುವ ಪರಿಸ್ಥಿತಿ ಬಂದಿದೆ. ಆದರೆ ನಾವು ಈ ಹಿಂದೆ ಓದುವಾಗ ಡಿಕ್ಷನರಿ ಹುಡುಕಿಕೊಂಡು ಲೈಬ್ರರಿಗಳಿಗೆ ಹೋಗಿ ಬರವಣಿಗೆ ಮೂಲಕ ನೋಟ್ಸ್ ಮಾಡಿಕೊಂಡು ಬರುತ್ತಿದ್ದೆವು. ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಬಿ.ಟಿ. ಜಗದೀಶ್ ಮಾತನಾಡುತ್ತಾ, ನಮ್ಮ ಶಾಲೆ ಆಧುನಿಕತೆ ಅಳವಡಿಸಿಕೊಂಡ ಶಾಲೆಯಾಗಿದೆ. ಪ್ರತಿ ತಿಂಗಳು ಮಕ್ಕಳ ಒಂದು ಪ್ರತಿಭೆಯನ್ನು ತರುವ ಮೂಲಕ ವಸ್ತು ಪ್ರದರ್ಶನಗಳು, ಚಿತ್ರಕಲಾ, ಕರಕುಶಲತೆ ಬಗ್ಗೆ ಹೆಚ್ಚು ಗಮನ ನೀಡುತ್ತಾ ಬಂದಿದ್ದೇವೆ. ಅದರಲ್ಲಿ ಶಾಲಾ ಶಿಕ್ಷಕರು, ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ತಿಂಗಳು ಕಾರ್ಯಕ್ರಮ ನಡೆಯುತ್ತ ಬಂದಿದೆ. ಇದು ನಿಮ್ಮ ಶಾಲೆ. ಇದರ ಅವಶ್ಯಕತೆ ಇರುವ ಬಗ್ಗೆ ಮಾಹಿತಿ ನೀಡಿದರೆ ನಾವು ಅಭಿವೃದ್ಧಿ ಬಗ್ಗೆ ಗಮನ ನೀಡುತ್ತೇವೆ ಎಂದು ತಿಳಿಸಿದರು.
ಪತ್ರಕರ್ತ ರಘುನಾಥ್ ಕಾರ್ಯಕ್ರಮದಲ್ಲಿ 2024ರ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ, ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರ ಇರಬೇಕು ಹಾಗೂ ಕೊರೋನಾ ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಲ್ಪತರು ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್ ಮಾತನಾಡುತ್ತಾ, ನಾನು ಹೋದ ಬಾರಿ ಈ ಕ್ಷೇತ್ರದ ಶಾಸಕನಾಗಿದ್ದಾಗ ಈ ನನ್ನ ಕ್ಷೇತ್ರದಲ್ಲಿ ಸುಮಾರು ೩೦೦ ಕೋಟಿಯ ಅನುದಾನವನ್ನು ಶೈಕ್ಷಣಿಕ ಅಭಿವೃದ್ಧಿಗಾಗಿ ಹಣವನ್ನು ನೀಡಿದ್ದೇನೆ. ಅದರಲ್ಲಿ ಹಳೇಬೀಡು ಕೆಪಿಎಸ್ ಶಾಲೆ ಪ್ರಥಮ ದರ್ಜೆ ಕಾಲೇಜು ನರಸಿಪುರ ವಸತಿ ಶಾಲೆ ಇನ್ನು ಹಲವಾರು ಶಾಲೆಗಳಿಗೆ ಹಣ ನೀಡಿದ್ದೇನೆ. ಶೈಕ್ಷಣಿಕವಾಗಿ ಹೊಸ ಕಟ್ಟಡಗಳ ನಿರ್ಮಾಣ ಮಾಡಿದ್ದು ನನಗೆ ಸಂತೋಷ ತಂದಿದೆ. ನನ್ನ ಶಾಲೆಗೆ ಶ್ರಮ ವಹಿಸಿದ ನನ್ನ ಕುಟುಂಬ ವರ್ಗದವರು ಈ ಶಾಲೆ ಅಭಿವೃದ್ಧಿ ತಂದಿದ್ದಾರೆ. ಇದರಲ್ಲಿ ನನ್ನ ಹೆಚ್ಚಿನ ಪಾತ್ರವಿಲ್ಲ. ಇದು ನಮ್ಮ ತಂದೆ ಸೋಮಶೇಖರ್‌ರವರ ಕನಸು ನನಸು ಮಾಡಿದ್ದೇನೆ. ಇದರ ಸಹಕಾರವನ್ನು ಸ್ಥಳೀಯ ಜನತೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯಿಂದ ಮಕ್ಕಳ ಭವಿಷ್ಯವನ್ನು ನೀಡುವುದರಲ್ಲಿ ಸಿದ್ದರಾಗಿದ್ದೇವೆ ಎಂದು ತಿಳಿಸಿದರು.ಪ್ರಾಂಶುಪಾಲ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಯಲ್ಲಿ ೧೯೮೬- ೮೭ನೇ ಸಾಲಿನಲ್ಲಿ ಈ ಶಾಲೆ ಪ್ರಾರಂಭವಾಗಿದ್ದು ಹಂತ-ಹಂತವಾಗಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ, ಕಾಲೇಜು, ಕನ್ನಡ, ಇಂಗ್ಲಿಷ್ ಮೀಡಿಯಂನಲ್ಲಿ ಅತ್ಯುತ್ತಮ ಬೋಧನೆ ನೀಡುತ್ತಾ ಬಂದಿದೆ. ಸ್ಥಳೀಯರು ಮಕ್ಕಳನ್ನು ಸೇರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಿವಲಿಂಗೇಗೌಡ, ವಂದನಗೌಡ, ಸಹ ಶಿಕ್ಷಕರು ಹಾಜರಿದ್ದರು.