ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ತಿದ್ದಿ ತೀಡಿ ಸರಿ ದಾರಿ ತೋರುವ ಶಿಕ್ಷಕರು, ರೋಗಿಗಳಿಗೆ ಉತ್ತಮ ಸೇವೆ ನೀಡಿ ಆರೈಕೆ ಮಾಡುವ ವೈದ್ಯರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ವೈದ್ಯಾಧಿಕಾರಿ ಡಾ.ಶಿವಲಿಂಗಯ್ಯ ತಿಳಿಸಿದರು.ಬೃಹನ್ ಮಠದಲ್ಲಿ ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್ ನ ವಿದ್ಯಾಧಾರೆ ಫ್ರೀ ಸ್ಕೂಲ್ ನ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ವಿದ್ಯೆ ತುಂಬ ಮುಖ್ಯ. ವಿದ್ಯೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ವಿದ್ಯೆಯೇ ಮಾತಾ - ಪಿತೃರು, ಬುದ್ಧಿಯೇ ಸಹೋದರ, ಒಳ್ಳೆಯ ನಡೆ ನುಡಿಗಳು ನೆಂಟರಿಷ್ಟರಿದ್ದಂತೆ. ವಿದ್ಯೆಯೇ ಸಂಪತ್ತು. ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಮಾಡಬೇಕು ಎಂದು ಕರೆ ನೀಡಿದರು.ಕೆಂಪಯ್ಯನ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುಂದ್ರಪ್ಪ ಮಾತನಾಡಿ, ಹೋಬಳಿಯಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎಂಬ ಆಶಯ ಇಟ್ಟುಕೊಂಡು ಎಚ್.ವಿ.ಅಶ್ವಿನ್ ಕುಮಾರ್ ಶಾಲೆ ಪ್ರಾರಂಭಿಸಿದ್ದಾರೆ. ಮುಂದಿನ ಸಾಲಿನಲ್ಲಿ 1 ರಿಂದ 5ನೇ ತರಗತಿವರೆಗೂ ಶಾಲೆ ಪ್ರಾರಂಭವಾಗಲಿದೆ. ಜನರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ನವೋದಯ ಶಾಲೆ ನಿವೃತ್ತ ಶಿಕ್ಷಕ ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಡೆಯುವ ಅಂಕಗಳು ಗಣನೆಗೆ ಬರುತ್ತವೆ, ನವೋದಯ ಶಾಲೆಯಲ್ಲಿ ಮಕ್ಕಳಿಗೆ ಅಂಕಗಳ ಜೊತೆಗೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತದೆ ಎಂದು ಹೇಳಿದರು.ಇದೇ ವೇಳೆ ಹಲಗೂರು ಭಾಗದಲ್ಲಿ ಶಿಕ್ಷಣ ಸೇವೆಗಾಗಿ ಸುಬ್ಬಣ್ಣನವರ ನೆನಪಿನಲ್ಲಿ ಸುಂದ್ರಪ್ಪ ಅವರಿಗೆ ಸುಬ್ಬಣ್ಣ ಪ್ರಶಸ್ತಿ ಮತ್ತು ವೈದ್ಯಕೀಯ ಸೇವೆಗಾಗಿ ಶ್ರೀ ಬಸವಗೌಡರ ಸ್ಮರಣಾರ್ಥ ಡಾ.ಶಿವಲಿಂಗಯ್ಯ ಅವರಿಗೆ ಬಸವೇಗೌಡ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆಯಲ್ಲಿ ನಡೆದ ಪಠ್ಯ ಮತ್ತು ಪಠ್ಯೇತರ ಸ್ಪರ್ಧೆ, ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾಗರಾಜು, ಶಾಲೆ ಸಂಸ್ಥಾಪಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಪ್ರಾಂಶುಪಾಲೆ ಎಚ್.ವಿ.ಶ್ವೇತಕುಮಾರಿ, ಶಿಕ್ಷಕರಾದ ಸೌಮ್ಯ, ಶೃತಿ, ಮಧು, ಸಹಾಯಕರಾದ ಮಾಲಾ, ಲಕ್ಷ್ಮೀ ಶಾಲೆ ವಾಹನ ಚಾಲಕ ಶರತ್ ಮತ್ತು ಇತರರು ಇದ್ದರು.