ಸಾರಾಂಶ
ಕೊಪ್ಪಳ:
ಒಬ್ಬರ ಕೈಯಲ್ಲಿ ಬುಟ್ಟಿ, ಇನ್ನೊಬ್ಬರ ಕೈಯಲ್ಲಿ ಥಾಪೆ. ಅತ್ತ ಮರಳು ಸೋಸುವ ಮಹಿಳೆಯರು!ಈ ದೃಶ್ಯ ಕಂಡು ಬಂದಿದ್ದು ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಶಾಲಾ ಕಾಂಪೌಂಡ್ ಚಿಕ್ಕದಾಗಿದ್ದರಿಂದ ಪುಂಡರ ಹಾವಳಿ ಹೆಚ್ಚಾಗಿತ್ತು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿತ್ತು. ಆದರೆ, ಕಾಂಪೌಂಡ್ ಎತ್ತರಿಸಲು ಅನುದಾನ ಇರಲಿಲ್ಲ. ಈ ಕುರಿತು ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಚರ್ಚಿಸಿ ತಾವೇ ಹಣ ಹೊಂದಿಸಿ ಕಾಮಗಾರಿ ಆರಂಭಿಸಿದ್ದರು. ಕಾಂಪೌಂಡ್ ಎತ್ತರಿಸುವ ಕಾರ್ಯ ಶನಿವಾರ ಮುಗಿಗಿದ್ದು ಭಾನುವಾರದಿಂದ ಪ್ಲಾಸ್ಟರ್ ಆರಂಭವಾಗಿದೆ. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಿಕ್ಷಕರು, ಶಾಲೆಯ ಹಳೇ ವಿದ್ಯಾರ್ಥಿಗಳು ಬಿಸಿಲ ಝಳ ಲೆಕ್ಕಸದೆ ತಮ್ಮ ಸೇವೆ ಸಲ್ಲಿಸಿದರು. ಇವರಿಗೆ ಕಾರ್ಮಿಕ ಸಂಘದ ಸದಸ್ಯರು ಸಾಥ್ ನೀಡಿದರು.ಭಾನುವಾರ ರಜಾ ದಿನವಾಗಿದ್ದರಿಂದ ಎಲ್ಲ ಶಿಕ್ಷಕರು ಬೆಳಗ್ಗೆಯಿಂದಲೇ ಕೈಯಲ್ಲಿ ಕನ್ರಿ ಹಿಡಿದು ಪರಿಣತರಂತೆ ಕೆಲಸ ಮಾಡಿದರು. ತಮ್ಮ ಶಾಲೆಗೆ ಸೇವೆ ಸಲ್ಲಿಸಬೇಕೆಂದು ಪಣ ತೊಟ್ಟು ಸೇವಾ ಕಾರ್ಯದಲ್ಲಿ ತೊಡಗಿದರು. ಇವರೊಂದಿಗೆ ಹಳೆ ವಿದ್ಯಾರ್ಥಿಗಳು ಬೆನ್ನುಲುಬಾಗಿ ನಿಂತು ಶ್ರಮದಾನ ಮಾಡಿದರು.
₹ 3 ಲಕ್ಷ ಖರ್ಚು:ಶಾಲಾ ಕಾಂಪೌಂಡ್ ಎತ್ತರಿಸಲು ಈ ವರೆಗೆ ₹ 3 ಲಕ್ಷ ಖರ್ಚು ಮಾಡಲಾಗಿದೆ. ಇದೆಲ್ಲವನ್ನು ದೇಣಿಗೆಯಿಂದಲೇ ಸ್ವೀಕರಿಸಲಾಗಿದೆ. ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ನೆರವು ನೀಡಿದ್ದಾರೆ. ಹೀಗಾಗಿ ಕೇಲವೇ ವಾರದಲ್ಲಿ ಕಾಂಪೌಂಡ್ ಕಾಮಗಾರಿ ಬಹುತೇಕ ಪೂರ್ಣವಾಗಿದೆ.ಮರಳು ಸೋಸಿದ ಹೇಮಲತಾ:
ಶಾಲಾ ಆವರಣದಲ್ಲಿ ಪ್ಲಾಸ್ಟರ್‌ಗೆ ಬೇಕಾಗುವ ಮರಳು ಸೋಸುವ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಶಿಕ್ಷಕರೊಂದಿಗೆ ಸೇರಿಕೊಂಡು ಹೇಮಲತಾ ನಾಯಕ, ಬುಟ್ಟಿಯಲ್ಲಿ ಮರಳು ತುಂಬಿಕೊಂಡು ಜಾಳಿಗೆಯಲ್ಲಿ ಹಾಕಿದರು. ಎರಡು ಬದಿ ಜಾಳಿಗೆ ಹಿಡಿದ್ದ ಶಿಕ್ಷಕರು ಅದನ್ನು ಸೋಸಿದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಮಾಡುತ್ತಿರುವುದು ಶ್ಲಾಘನೀಯ. ಎಲ್ಲ ಸೌಲಭ್ಯಕ್ಕೆ ಸರ್ಕಾರದ ಕಡೆಗೆ ಮಖ ಮಾಡದೆ ಈ ರೀತಿ ಸೇವಾ ಕಾರ್ಯ ಮಾಡುವುದರಿಂದ ಶಾಲೆ ಹಾಗೂ ಗ್ರಾಮ ಅಭಿವೃದ್ಧಿಯಾಗುತ್ತವೆ ಎಂದರು.
ಕಾರ್ಮಿಕರಾದ ಶಿಕ್ಷಕರು:ನಮ್ಮ ಶಾಲಾ ತಡೆಗೊಡೆ ನಿರ್ಮಾಣದ ಸೇವಾ ಕಾರ್ಯಕ್ಕೆ ನಾವು ಅಳಿಲು ಸೇವೆ ಮಾಡಬೇಕೆಂದು ಸ್ವಯಂಪ್ರೇರಿತವಾಗಿ ಮುಖ್ಯಶಿಕ್ಷಕ ಬೀರಪ್ಪ ಅಂಡಗಿ, ಶಿಕ್ಷಕರಾದ ಶರಣಪ್ಪ ಕೆಳಗಿನಗೌಡ್ರ, ಭಾರತಿ ಹವಳೆ, ಭಾರತಿ ಹವಳೆ, ಭಾರತಿ ಉಪಾಧ್ಯಾಯ, ಜ್ಯೋತಿ ಲಕ್ಷ್ಮಿ, ಪೂರ್ಣಿಮಾ ತುಪ್ಪದ, ಮಮತಾ, ಗಂಗಮ್ಮ ಕಪರಶೆಟ್ಟಿ, ಮಾಧವಿ ಅಂಗಡಿ, ಹನುಮಂತಪ್ಪ, ರಾಜಾ ಹುಸೇನ ಪ್ಲಾಸ್ಟರ್ ಕಾರ್ಯದಲ್ಲಿ ಭಾಗಿಯಾಗಿದ್ದರು. ಇವರಿಗೆ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ, ಗ್ರಾಪಂ ಸದಸ್ಯರು ಸಾಥ್ ನೀಡಿದರು.
ತಹಸೀಲ್ದಾರ್ ಮೆಚ್ಚುಗೆ:ಸರ್ಕಾರದ ಅನುದಾನ ನೆಚ್ಚದೆ ಶಾಲಾ ಕಾಂಪೌಂಡ್‌ನ್ನು ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ ನಿರ್ಮಿಸಿರುವ ಸುದ್ದಿ ತಿಳಿದ ತಹಸೀಲ್ದಾರ್ ವಿಠ್ಠಲ್ ಚೌಗಲೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಕೊರತೆ ಇದ್ದ ಕಾರಣ ಗ್ರಾಮಸ್ಥರ ಸಹಯೋಗದಲ್ಲಿ ಮತ್ತು ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳ ಸಹಕಾರದಿಂದ ಎಲ್ಲರೂ ಸೇರಿ ಕಾಂಪೌಂಡ್ ನಿರ್ಮಿಸಿದ್ದೇವೆ.ಬೀರಪ್ಪ ಅಂಡಗಿ, ಮುಖ್ಯಶಿಕ್ಷಕ