ಇಂದಿನ ಶಿಕ್ಷಣವು ಮುಂದಿನ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು. ಪಠ್ಯದ ಜತೆಗೆ ಮೌಲ್ಯ, ಸಂಸ್ಕಾರ, ಕಲೆ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರುರಾಜ್ ಕುಲಕರ್ಣಿ ಹೇಳಿದರು.

ಹಾವೇರಿ: ಇಂದಿನ ಶಿಕ್ಷಣವು ಮುಂದಿನ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು. ಪಠ್ಯದ ಜತೆಗೆ ಮೌಲ್ಯ, ಸಂಸ್ಕಾರ, ಕಲೆ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರುರಾಜ್ ಕುಲಕರ್ಣಿ ಹೇಳಿದರು.

ನಗರದ ಶ್ರೀ ಕೃಷ್ಣ ಮಂದಿರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ಪ್ರಶಿಕ್ಷಣ ಭಾರತಿ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ಸಹಮಿಲನ ಕಾರ್ಯಕ್ರಮವನ್ನು ತಾಯಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಸಂಚಾಲಕ ರಾಘವೇಂದ್ರ ಪಿ. ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ 1965ರಲ್ಲಿ ಆರಂಭಗೊಂಡಿದ್ದು, ಸೇವೆ, ಸಾಹಿತ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ 18 ವಿವಿಧ ಪ್ರಕಲ್ಪಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಪ್ರಶಿಕ್ಷಣ ಭಾರತಿ 2020ರಲ್ಲಿ ಆರಂಭವಾಗಿ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಶಿಕ್ಷಕರ ಸಹಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇನ್ನೋರ್ವ ವಕ್ತಾರ ಸಾಮಾಜಿಕ ಕಾರ್ಯಕರ್ತ ಕಿರಣ್‌ರಾಮ್ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿಯ ಮೌಲ್ಯಗಳನ್ನು ಇಂದಿನ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಭಾರತ ಹಿಂದಿನಿಂದಲೂ ವಿಶ್ವಗುರುವಾಗಿತ್ತು. ಆದರೆ ಪರಕೀಯರ ದಾಳಿಗಳು ಹಾಗೂ ಮೆಕಾಲೆ ಶಿಕ್ಷಣ ಪದ್ಧತಿಯ ಪ್ರಭಾವದಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯ ಸ್ವರೂಪ ಬದಲಾಯಿತು. ನಮ್ಮ ಪರಂಪರೆಯ ಶಿಕ್ಷಣದ ಆಶಯಗಳನ್ನು ಮತ್ತೆ ಮುನ್ನೆಲೆಗೆ ತರಬೇಕು ಎಂದು ಹೇಳಿದರು.

ಸಮಾರೋಪದಲ್ಲಿ ಮಾತನಾಡಿದ ಪ್ರಶಿಕ್ಷಣ ಭಾರತಿ ತಾಲೂಕು ಸಹ ಸಂಚಾಲಕ ಅಕ್ಷತಾ ಸೂರಪುರಮಠ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಸಮಯಪ್ರಜ್ಞೆ, ನಿಷ್ಠೆ ಹಾಗೂ ಕಾರ್ಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಮುಖ್ಯಶಿಕ್ಷಕರಿಗೆ ಗೌರವ ಸಮರ್ಪಿಸಲಾಯಿತು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಜಿಲ್ಲಾ ಸಂಚಾಲಕ ರಾಮ್ ಮೋಹನ್ ರಾವ್, ತಾಲೂಕು ಸಹ ಸಂಚಾಲಕ ಶ್ರವಣ್ ಕುಲಕರ್ಣಿ, ರಾಷ್ಟ್ರೋತ್ಥಾನ ಪರಿಷತ್‌ನ ಕಾರ್ಯಕರ್ತರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.