ಸಾರಾಂಶ
ಅಂಕೋಲಾ: ತಾಲೂಕಿನ ಹಿಚಕಡದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಅಸಭ್ಯ ವರ್ತನೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾನುಸತ್ಯತೆ ಬೆಳಕಿಗೆ ಬರುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಶಾಲಾ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಶಾಲೆಯ ಹೊರ ಆವರಣದಲ್ಲಿ ಸೇರಿದ ಶಾಲಾಭಿವೃದ್ಧಿ ಸಮಿತಿಯವರು, ಪಾಲಕರು ಹಾಗೂ ಗ್ರಾಮಸ್ಥರು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದರು. ಬೆಳಿಗ್ಗೆನಿಂದ ಸಂಜೆಯವರೆಗೂ ಶಾಂತ ರೀತಿಯಲ್ಲಿ ಪ್ರತಿಭಟಿಸಿ ತನಿಖೆಗೆ ಒತ್ತಾಯಿಸಿದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಆಗೇರ ಮಾತನಾಡಿ, ನಮ್ಮ ಶಾಲೆಯ ಮೇಲೆ ಗುರುತರ ಆರೋಪ ಬಂದಿರುವುದು ಶಾಲೆಗೆ ಕಪ್ಪು ಚುಕ್ಕೆಯಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಆತಂಕ ನಿವಾರಣೆಗೆ ಈ ಪ್ರಕರಣದ ಸೂಕ್ತ ತನಿಖೆಯಾಗಬೇಕು. ತನಿಖೆ ನಡೆಯದೇ ಹೋದರೆ ಸತ್ಯ ಮುಚ್ಚಿ ಹೋಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ತನಿಖೆ ನಡೆಯವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದರು.
103 ವರ್ಷಗಳ ಭವ್ಯ ಇತಿಹಾಸವಿರುವ ಈ ಶಾಲೆಯ ಶಿಕ್ಷಕರ ಮೇಲೆ ಅಸಭ್ಯ ವರ್ತನೆ ಆರೋಪ ಬಂದಿರುವುದು ನಿಜಕ್ಕೂ ಖಂಡನಾರ್ಹ ಎಂದರು.ನಮಗೆ ನ್ಯಾಯ ಸಿಗುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ತೀರ್ಮಾನ ಕೈಗೊಂಡಿದ್ದೇವೆ. ಇಂದು ನಾವು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಸೌಜನ್ಯಗೋಸ್ಕರ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಅವಹಾಲು ಕೇಳಲು ಮುಂದಾಗದಿರುವುದು ಖಂಡನೀಯ. ಕೂಡಲೇ ಈ ಪ್ರಕರಣದ ತನಿಖೆಗೆ ಸಂಬಂಧ ಪಟ್ಟ ಇಲಾಖೆ ಮುಂದಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ದಾರಿ ತೋರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜೇಶ್ವರಿ ಹರಿಕಂತ್ರ, ಕವಿತಾ ಆಗೇರ, ನಾಗವೇಣಿ ಆಗೇರ, ಯಮುನಾ ಹರಿಕಂತ್ರ, ಭವಾನಿ ಹರಿಕಂತ್ರ, ಗಾಯತ್ರಿ ನಾಯ್ಕ, ನಾಗರತ್ನ ನಾಯ್ಕ, ಸುಜಾತಾ ಹರಿಕಂತ್ರ, ರಜನಿ ನಾಯ್ಕ, ವೀಣಾ ಹರಿಕಂತ್ರ, ಮಂಗಲಾ ಹರಿಕಂತ್ರ, ಅಕ್ಷತಾ ಆಗೇರ, ರೇಷ್ಮಾ ಹರಿಕಂತ್ರ, ಲೀಲಾವತಿ ಹರಿಕಂತ್ರ, ವನಿತಾ ಆಗೇರ, ನಿರ್ಮಲಾ ಆಗೇರ, ಗೌರೀಶ ನಾಯ್ಕ, ಪ್ರಶಾಂತ ನಾಯಕ, ನಾರಾಯಣ ನಾಯ್ಕ, ಪುಷ್ಪಾ ಹರಿಕಂತ್ರ, ಭಾರತಿ ಹರಿಕಂತ್ರ, ಚಂದ್ರಕಲಾ ಹರಿಕಂತ್ರ, ನಿರ್ಮಲಾ ಆಗೇರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ರಾಯ್ಕರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.