ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು: ವಿಜಯ ಕುಮಾರ್

| Published : Dec 09 2024, 12:48 AM IST

ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು: ವಿಜಯ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ. ಶಿಕ್ಷಕರು ಸರ್ಕಾರದ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳನ್ನು ದಾಖಲಿಸಲು ಪೋಷಕರನ್ನು ಪ್ರೇರೇಪಿಸಬೇಕು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ ಸರ್ಕಾರಿ ಶಾಲೆ ಉಳಿಸಿಕೊಳ್ಳಬೇಕು ಎಂದು ಜಿಲ್ಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಕರೆ ನೀಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ದೈಹಿಕ ಶಿಕ್ಷಕ ಮಹಮದ್‌ ಇಮ್ರಾನ್‌ಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶಾಲಾ ಬಲವರ್ಧನೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಸಮರ್ಥ ಶಿಕ್ಷಕರಿದ್ದು, ಗುಣಾತ್ಮಕ ಶಿಕ್ಷಣ ಸಹ ದೊರೆಯುತ್ತಿದೆ. ಆದರೂ ಸಹ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿರುವುದು ಆತಂಕಕಾರಿಯಾಗಿದೆ. ಶಿಕ್ಷಕರು ಸರ್ಕಾರದ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳನ್ನು ದಾಖಲಿಸಲು ಪೋಷಕರನ್ನು ಪ್ರೇರೇಪಿಸಬೇಕು ಎಂದರು.

ದೈಹಿಕ ಶಿಕ್ಷಕ ಮಹಮದ್‌ ಇಮ್ರಾನ್ ಮಾತನಾಡಿ, ಕವಿ ಪುತಿನ ವ್ಯಾಸಂಗ ಮಾಡಿದ ಶಾಲೆಯಲ್ಲಿ 5 ವರ್ಷ ಕರ್ತವ್ಯ ನಿರ್ವಹಿಸುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಶಾಲೆ ಮಕ್ಕಳು ಖೋ ಖೋ ಪಂದ್ಯಾಟದಲ್ಲಿ ನಿರಂತರವಾಗಿ ಪ್ರತಿವರ್ಷವೂ ಪ್ರಥಮಸ್ಥಾನ ಪಡೆದಿದ್ದಾರೆ ಎಂದರು.

19 ವರ್ಷ ಕಾಲ ಪಾಂಡವಪುರ ತಾಲೂಕಿನಲ್ಲೇ ಕರ್ತವ್ಯನಿರ್ವಹಿದ್ದೇನೆ. ಇದೀಗ ಪಿಎಂಶ್ರೀ ಯೋಜನೆ ಅನುಷ್ಠಾನದಲ್ಲಿರುವ ಬೆಳ್ಳೂರು ಬಾಲಕಿಯರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆತಿದ್ದು, ಅಲ್ಲಿ ಕ್ರಿಯಾಶೀಲವಾಗಿ ಕರ್ತವ್ಯನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸಿ ಶಾಲಾಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಇದೇ ವೇಳೆ ದೈಹಿಕ ಶಿಕ್ಷಕ ಮಹಮದ್ ಇಮ್ರಾನ್‌ಗೆ ಸ್ಮರಣಿಕೆ ನೀಡಿ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು. ವಿಶೇಷವೆಂದರೆ ಶಾಲಾಮಕ್ಕಳು ಸಹ ತರಗತಿವಾರು ಪ್ರತ್ಯೇಕವಾಗಿ ಕಿರುಸ್ಮರಣಿಕೆ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್, ಅಮೃತಿ ಶಾಲೆ ಶಿಕ್ಷಕ ಮುತ್ತುರಾಜ್, ಸಹಶಿಕ್ಷಕರಾದ ಮಹಾಲಕ್ಷ್ಮಿ ಜಯಂತಿಬಿ. ಶೃತಿ ಪೂರ್ಣಿಮ ಗಿರಿಜಾ, ಮತ್ತಿತರರು ಭಾಗವಹಿಸಿದ್ದರು.