ಮಕ್ಕಳ ಭವಿಷ್ಯವನ್ನು ರೂಪಿಸುವ ಇಚ್ಛಾಶಕ್ತಿ ಶಿಕ್ಷಕರಿಗೆ ಬೇಕು-ಸಾಲಿಮಠ

| Published : Jun 03 2024, 12:30 AM IST

ಮಕ್ಕಳ ಭವಿಷ್ಯವನ್ನು ರೂಪಿಸುವ ಇಚ್ಛಾಶಕ್ತಿ ಶಿಕ್ಷಕರಿಗೆ ಬೇಕು-ಸಾಲಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕ ವೃತ್ತಿ ಪಾವಿತ್ರ್ಯ ಕಾಯ್ದುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವ ಇಚ್ಛಾಶಕ್ತಿ ಶಿಕ್ಷಕರಿಗೆ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.

ಹಾನಗಲ್ಲ: ಶಿಕ್ಷಕ ವೃತ್ತಿ ಪಾವಿತ್ರ್ಯ ಕಾಯ್ದುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವ ಇಚ್ಛಾಶಕ್ತಿ ಶಿಕ್ಷಕರಿಗೆ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್. ಕರಿಯಣ್ಣನವರ ಅವರ ಸನ್ಮಾನ, ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳು ಅತ್ಯಂತ ಉತ್ತಮ ಶಿಕ್ಷಣಕ್ಕೆ ಸಾಕ್ಷಿಯಾಗುತ್ತಿವೆ. ಸರಕಾರಿ ಶಾಲೆಗಳ ದಾಖಲಾತಿಯೂ ಹೆಚ್ಚುತ್ತಿದೆ. ಇದೆಲ್ಲ ಆಯಾ ಶಾಲೆಗಳ ಶಿಕ್ಷಕರ ಪರಿಶ್ರಮದ ಫಲ. ಸರಕಾರದ ಸುತ್ತೋಲೆಗಳು, ಆಗಾಗ ಕೇಳುವ ಮಾಹಿತಿಯನ್ನು ನೀಡುವಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಅತ್ಯಂತ ಜಾಗರೂಕರಾಗಿರಬೇಕಲ್ಲದೆ, ಎಲ್ಲ ಸಮಯದಲ್ಲಿಯೂ ಶಾಲಾ ಮಾಹಿತಿಯನ್ನು ಬಲ್ಲವರಾಗಿರಬೇಕು. ಅಧಿಕಾರಿಗಳು ಆಯಾ ಸಂದರ್ಭದಲ್ಲಿ ಮಾಹಿತಿ ಕೇಳಿದಾಗ ಸಮರ್ಪಕ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಆ ದೆಸೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಬಿ.ಎಸ್.ಕರಿಯಣ್ಣನವರ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಪಾಲಕರು, ಅಧಿಕಾರಿಗಳ ಪ್ರಶಂಸೆಗೆ ಅವರು ಪಾತ್ರರಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಸ್. ಕರಿಯಣ್ಣನವರ, ಒಂದು ಶಾಲೆಯ ಯಶಸ್ಸು ಅಲ್ಲಿನ ಶಿಕ್ಷಕರು, ಮುಖ್ಯೋಪಾಧ್ಯಾಯರ ಕ್ರಿಯಾಶೀಲತೆಯನ್ನು ಒಳಗೊಂಡಿದೆ. ಶಿಕ್ಷಕರು ಒಗ್ಗಟ್ಟು ಪ್ರದರ್ಶಿಸಬೇಕು. ಶಾಲೆಗಳು ಹತ್ತು ಹಲವು ಸಮಸ್ಯೆಗಳಿಗೆ ಒಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಪಾಲಕರ ಮಾರ್ಗದರ್ಶನದಲ್ಲಿ ಎಲ್ಲವನ್ನೂ ಸುಖಾಂತ್ಯ ಮಾಡಬೇಕಾದ ಸಂದರ್ಭಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಬಡತನ, ಮಾರ್ಗದರ್ಶನದ ಕೊರತೆ, ಕೌಟುಂಬಿಕ ಸಮಸ್ಯೆಗಳು ಕಾಡುತ್ತವೆ. ಇಂತೆಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ತಮ್ಮ ಹೊಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಮುಖ್ಯ ಶಿಕ್ಷಕರು ಅಂಜುವ ಅಗತ್ಯವಿಲ್ಲ. ಜಾಗರೂಕರಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಶಿಕ್ಷಕ ನರಸಿಂಹಕೋಮಾರ ಮಾತನಾಡಿ, ಮುಖ್ಯ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋದ ಶ್ರೇಯಸ್ಸು ಬಿ.ಎಸ್. ಕರಿಯಣ್ಣನವರ ಅವರಿಗೆ ಸಲ್ಲುತ್ತದೆ. ಶಿಕ್ಷಕರ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಹಾಜರಾತಿ ಕೊರತೆ. ಕೌಟುಂಬಿಕ ಸಮಸ್ಯೆಗಳ ನಡುವೆ ಮಕ್ಕಳಲ್ಲಿ ಬರುವ ಸಮಸ್ಯೆಗಳಿಗೆ ಮುಖ್ಯೋಪಾಧ್ಯಾಯರೆ ಹಲವು ಸಂದರ್ಭದಲ್ಲಿ ಹೊಣೆಯಾಗಬೇಕಾಗುತ್ತದೆ. ಇಂತಹ ಸಮಸ್ಯೆಗಳು ಬಂದಾಗ ಬಿ.ಎಸ್. ಕರಿಯಣ್ಣನವರ ಇಡೀ ತಾಲೂಕಿನ ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ವಿಜಯಕುಮಾರ ಚಿಕ್ಕೇರಿ, ಮಹೇಶ ನಾಯಕ, ಜಿಲ್ಲಾ ಕಾರ್ಯದರ್ಶಿ ರಾಕೇಶ ಜಿಗಳಿ, ಬಡ್ತಿ ಶಿಕ್ಷಕರ ಸಂಘದ ಎಂ.ಎ. ಮನ್ನಂಗಿ, ಆರ್.ಬಿ. ಬಡಿಗೇರ, ಮುಖ್ಯ ಶಿಕ್ಷಕರಾದ ಕಮಲಾ ನಾಯಕ, ಶಿವಯೋಗಿ ನರೆಗಲ್ಲ, ರಮೇಶ ಪವಾರ, ಶಿಕ್ಷಕ ಬಳಗದ ನಿರಂಜನ ಗುಡಿ, ವೀರಪ್ಪ ಕರೆಗೊಂಡರ, ಶಿವಾನಂದ ನಾಯಕ, ಬಿ.ಎನ್. ಅರಳೇಶ್ವರ, ರವಿ ಹೊಸಮನಿ, ಕುಮಾರ ಗುಂಡಳ್ಳಿ, ಬಿ.ಕೆ. ಶ್ರೀನಿವಾಸ, ಮಮತಾ ನಾಯಕ, ಶೈಲಜಾ ಕುಂಬಾರಿ, ಲಕ್ಷ್ಮಣ ಉಗಳವಾಡ ಮೊದಲಾದವರು ಈ ಸಂದರ್ಭದಲ್ಲಿದ್ದರು.