ಶಿಕ್ಷಕರು ವೃತ್ತಿಪರತೆ, ಕೌಶಲ ಹೆಚ್ಚಿಸಿಕೊಳ್ಳಬೇಕು: ವಾಲ್ಟರ್ ಎಚ್.ಡಿ.ಮೆಲ್ಲೋ

| Published : Jan 19 2024, 01:47 AM IST

ಶಿಕ್ಷಕರು ವೃತ್ತಿಪರತೆ, ಕೌಶಲ ಹೆಚ್ಚಿಸಿಕೊಳ್ಳಬೇಕು: ವಾಲ್ಟರ್ ಎಚ್.ಡಿ.ಮೆಲ್ಲೋ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ಹೊಸತನಕ್ಕೆ ಹೊಂದಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಬೆಳಗಾವಿ ವಿಭಾಗದ ಕಾರ್ಯದರ್ಶಿ ಮತ್ತು ಸಹನಿರ್ದೇಶಕ ವಾಲ್ಟರ್ ಎಚ್.ಡಿ.ಮೆಲ್ಲೋ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವೃತ್ತಿ ಪರತೆ, ಕೌಶಲ್ಯ, ಸಮಯ ಪಾಲನೆ ಮತ್ತು ಶಿಸ್ತು ಪ್ರಜ್ಞೆ ಇವುಗಳನ್ನು ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಅಳವಡಿಕೊಳ್ಳಲೇಬೇಕು. ತಮ್ಮ ಶಾಲೆಗಳನ್ನು ಮಾದರಿ ಶಾಲೆಯಾಗಿಸಲು ಪ್ರತಿಯೊಬ್ಬ ಮುಖ್ಯಗುರುಗಳು ಪ್ರಾಮಾಣಿಕ ಸೇವೆಗೆ ಪ್ರಯತ್ನಿಸಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಬೆಳಗಾವಿ ವಿಭಾಗದ ಕಾರ್ಯದರ್ಶಿ ಮತ್ತು ಸಹನಿರ್ದೇಶಕ ವಾಲ್ಟರ್ ಎಚ್.ಡಿ.ಮೆಲ್ಲೋ ಕರೆ ನೀಡಿದರು.

ತಾಲೂಕಿನ ಯಲ್ಲಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳ ಪ್ರೌಢಶಾಲಾ ಮುಖ್ಯಾಧ್ಯಾಪಕರ ವೃತ್ತಿ ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಸದಾ ಅಧ್ಯಯನಶೀಲರಾಗಿದ್ದು ಮಕ್ಕಳಂತೆ ಸದಾ ಹೊಸತನದ ತುಡಿತವನ್ನು ಹೊಂದಿ ಜ್ಞಾನ ಸಂಪಾದಿಸಬೇಕು ಎಂದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಹಂಬಲದೊಡನೆ ಕಾಲಕ್ಕೆ ತಕ್ಕಂತೆ ಬೋಧನಾ ಕೌಶಲ ಬಳಸಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಮನೋಶಕ್ತಿ ವೃದ್ಧಿಸಿ ಅವರು ಕೂಡ ಜ್ಞಾನವಾಹಿನಿಯಲ್ಲಿ ಬೆರೆತು ಯಶಸ್ವಿಯಾಗುವಂತೆ ಉತ್ಸಾಹ ತುಂಬಬೇಕು ಎಂದರು.

ಬಿಇಒ ಅಶೋಕ ಬಸಣ್ಣವರ ಮಾತನಾಡಿ, ಶಿಕ್ಷಕನೆಂದರೆ ಶ್ರೀಗಂಧದ ತುಂಡಿನಂತಿರಬೇಕು. ಜ್ಞಾನದ ಬೆಳವಣಿಗೆಯಲ್ಲಿ ತಾನು ಕರಗಿದರೂ ಮಕ್ಕಳ ಮನದಲ್ಲಿ ಸುಜ್ಞಾನವೆಂಬ ಸೌಗಂಧ ಹರಡುತ್ತ ಮಕ್ಕಳಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.

ತಾಪಂ ಇಒ ಸಂಜಯ ಜುನ್ನೂರ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಸುಧಾರಣೆಗಾಗಿ ವಾಸ್ತವ ನೆಲೆಗಟ್ಟಲ್ಲಿ ಬೋಧನಾ ಪದ್ಧತಿ ರೂಢಿಸಿಕೊಳ್ಳಬೇಕು. ಫಲಿತಾಂಶ ಹೆಚ್ಚಳಕ್ಕೆ ಮಕ್ಕಳು ಮತ್ತು ಪಾಲಕರೊಡನೆ ಸಮನ್ವಯ ಸಾಧಿಸಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.

ಶಾಲೆಯ ಮುಗು ಶಿವಾನಂದ ಮರೆಗುದ್ದಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಅಶೋಕ ಕಿತ್ತೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಹಾದೇವ ಮೋಪಗಾರ, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಭೀಮಪ್ಪ ಕಡಕೋಳ, ಕ್ಷೇತ್ರ ಸಮನ್ವಯ ಅಧಿಕಾರಿ ರಮೇಶ ಅವಟಿ ಉಪಸ್ಥಿತರಿದ್ದರು.