ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಮಕ್ಕಳ ದಾಖಲಾತಿ ಹೆಚ್ಚಿಸಬೇಕು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು, ಪಠ್ಯ, ಬೋಧನೆ ಕಡಿಮೆ ಪಠ್ಯೇತರ, ದಾಖಲೆಗಳ ನಿರ್ವಹಣೆ ಜಾಸ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಒತ್ತು, ಅರೆಬರೆ ಸವಲತ್ತುಗಳು, ಬೆಟ್ಟದಷ್ಟು ಕೆಲಸ-ಕಾರ್ಯಗಳು, ಹೀಗೆ ಅನ್ಯ ಚಟುವಟಿಕೆಗಳಡಿ ಸಿಕ್ಕಿ ಹಾಕಿಕೊಂಡು ಸರ್ಕಾರಿ ಶಾಲೆಗಳ ಶಿಕ್ಷಕರು ನಲುಗುತ್ತಿದ್ದು. ಇದರಿಂದಾಗಿ ಗುಣಮಟ್ಟದ ಶಿಕ್ಷಣ, ಫಲಿತಾಂಶ ಸುಧಾರಣೆಗೆ ಕೈಗೊಂಡ ಹಲವಾರು ಕ್ರಮಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಖಾಲಿ ಹುದ್ದೆಗಳ ಕಲರವದಲ್ಲಿ ಕಂಗೊಳಿಸುತ್ತಿರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ತುಂಬಿ ತುಳುಕುತ್ತಿದ್ದಾರೆ. ಖಾಯಂ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಪಠ್ಯದ ಜೊತೆಗೆ ವಿವಿಧ ಕೆಲಸ ಕಾರ್ಯಗಳ ಹೊರೆಯೇ ಜಾಸ್ತಿಯಾಗಿರುವುದರಿಂದ ಯಾವುದಕ್ಕೂ ನ್ಯಾಯ ಕಲ್ಪಿಸಲು ಆಗುತ್ತಿಲ್ಲ.ಜಿಲ್ಲೆಯಲ್ಲಿ ಸುಮಾರು 675 ಕಿರಿಯ, 773 ಹಿರಿಯ ಸೇರಿ ಒಟ್ಟು 1,448 ಪ್ರಾಥಮಿಕ ಹಾಗೂ 227 ಪ್ರೌಢಶಾಲೆ ಸೇರಿ ಒಟ್ಟು 1,675 ಸರ್ಕಾರಿ ಶಾಲೆಗಳಿದ್ದು, ಇವುಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 4 ಸಾವಿರ ಅದೇ ರೀತಿ ಪ್ರೌಢಶಾಲೆಯಲ್ಲಿ 1,350 ಕ್ಕು ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಕೊಠಡಿಗಳು, ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್, ವಿದ್ಯುತ್, ಪೀಠೋಪಕರಣ ಸೇರಿ ಒಂದಿಲ್ಲಾ ಒಂದು ಸಮಸ್ಯೆಗಳು ಶಾಲೆಗಳಲ್ಲಿ ತಳಕು ಹಾಕುತ್ತಿದ್ದು, ಇವುಗಳನ್ನು ಮೀರಿ ಕೆಲಸ ಮಾಡುವ ಒತ್ತಡದಲ್ಲಿ ಶಿಕ್ಷಕರಿದ್ದು, ಅವರು ಎದುರಿಸುತ್ತಿರುವ ಸವಾಲುಗಳು, ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ.
ದಾಖಲೆಗಳೇ ಮುಖ್ಯ : ಶಿಕ್ಷಕರಾದವರು ಮಕ್ಕಳಿಗೆ ಉತ್ತರ ರೀತಿಯಲ್ಲಿ ಬೋಧನೆ ಮಾಡಿ, ಗುಣಮಟ್ಟದ ಶಿಕ್ಷಣ ಕೊಡಬೇಕು ಆದರೆ ಇದೀಗ ಸರ್ಕಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ರೂಪಿಸುತ್ತಿರುವ ದಿನಕ್ಕೊಂದು ನಿಮಯ-ನಿಬಂಧನೆಗಳು ಶಿಕ್ಷಕರ ಉತ್ಸಾಹ ಕುಗ್ಗಿಸಿದೆ. ವಿದ್ಯಾರ್ಥಿಗಳ ಆನ್ ಲೈನ್ ಹಾಜರಾತಿ ಪಡೆಯಬೇಕು, ಎಸ್‌ಟಿಸಿ, ಎಫ್‌ಎಲ್‌ಎನ್ ಹಾಗೂ ಎಲ್‌ಬಿಎ ಅನುಷ್ಠಾನ ಮಾಡಬೇಕು, ಬಿಸಿಯೂಟದ ಹಾಜರಾತಿ, ಮೂರು ಮಾದರಿಯ ಪರೀಕ್ಷೆ, ಶೇ.100 ರಷ್ಟು ಹಾಜರಾತಿ, ಫಲಿತಾಂಶ, ಪರ್ಯಾಯ ಬೋಧನೆ, ಘಟಕ ಪರೀಕ್ಷೆಗಳ ತಯಾರಿ, ಉತ್ತರ ಪತ್ರಿಕೆಗಳನ್ನು ತಿದ್ದುವುದು, ಅಂಕ ಹಾಕಿ ಹಿಂದೆ ಬಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಮತ್ತೆ ಅವರನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕೆಲಸಗಳನ್ನು ಮಾಡಿ ದಾಖಲೆಗಳನ್ನು ರೂಪಿಸುವಲ್ಲಿಯೇ ಕಾಲಕಳೆಯುತ್ತಿದ್ದು, ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಿಂತ ದಾಖಲೆಗಳೇ ಇಲಾಖೆಗೆ ಮುಖ್ಯವಾಗಿದೆ ಎಂದು ಅನುಭವಿ ಶಿಕ್ಷಕರೊಬ್ಬರು ಕನ್ನಡಪ್ರಭದೊಂದಿಗೆ ಇಡೀ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಯನ್ನು ಹಂಚಿಕೊಂಡರು.ಕೆಲಸ ಮಾಡುವ ಶಿಕ್ಷಕರಿ ಸಮಸ್ಯೆಗಳು, ಅವರು ಅನುಭವಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಂಡು ಒತ್ತಡದ ಕೆಲಸವನ್ನು ಸರಳೀಕರಣಗೊಳಿಸಬೇಕಾದ ಸರ್ಕಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸಹಕಾರ ನೀಡದೇ ಇನ್ನಷ್ಟು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತಿದ್ದಾರೆ ಎನ್ನುವುದು ಶಿಕ್ಷಣ ತಜ್ಞರ ಗಂಭೀರ ಆರೋಪ.