ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಿ ಸಮಾಜದ ಆಸ್ತಿಯನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಸ್ತವಾಡಿಯ ಸಂಕಲ್ಪ ಸೌಧ ಸಭಾಂಗಣದಲ್ಲಿ ಜ್ಞಾನದೀಪ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಸ್ತಿಯನ್ನು ಮಾಡದೇ, ಮಕ್ಕಳನ್ನು ಸಮಾಜದ ಆಸ್ತಿ ಆಗುವಂತೆ ಮಾಡಿ, ಈ ಮಕ್ಕಳೆಂಬ ಆಸ್ತಿಗೆ ಮೌಲ್ಯ ತುಂಬ ಬೇಕಾದಲ್ಲಿ ಶಿಕ್ಷಕರು ಮತ್ತು ಪೋಷಕರು ಅಮೂಲ್ಯವಾದ ಪ್ರೀತಿ, ಮಾರ್ಗದರ್ಶನ ಮುಖ್ಯ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಕುರಿತು ಶಿಕ್ಷಕರು ಯೋಚಿಸಬೇಕು ಎಂದರು.
ಸಂಶೋಧನೆಗಳಿಂದಾಗಿ ಶಿಕ್ಷಣ ಎಂಬುದು ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿರುವುದು ವಿಪರ್ಯಾಸ. ಭೌತಿಕ ಅಭಿವೃದ್ಧಿಗೆ ಹಿಂದಿನ ಶಿಕ್ಷಣ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿರುವ ಕಾರಣ ಮೌಲಿಕ ಜೀವನ ಅವನತಿಯ ದಾರಿ ಹಿಡಿಯುತ್ತಿದೆ. ಇಂದಿನ ಶಿಕ್ಷಣದಲ್ಲಿ ಹಣ ಗಳಿಕೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿರುವುದರಿಂದ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಜನ್ಮಕೊಟ್ಟ ತಂದೆ ತಾಯಿಯನ್ನು ಕೂಡ ಅವಗಣನೆಗೆ ಒಳಗಾಗುತ್ತಿದ್ದಾರೆ. ಈ ಬೆಳವಣಿಗೆ ಮನುಕುಲಕ್ಕೆ ಅಪಾಯಕಾರಿ ಎಂದರು.ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಜವಬ್ದಾರಿ ಶಿಕ್ಷಕರು ಮತ್ತು ಪೋಷಕರ ಕರ್ತವ್ಯವಾಗಿದೆ. ಶಿಕ್ಷಣದ ಜೊತೆಗೆ ನಾಡು-ನುಡಿ, ಸಂಸ್ಕೃತಿ- ಸಂಸ್ಕಾರ, ಜೀವನದ ಮೌಲ್ಯಗಳು, ಮಾನವೀಯತೆಯ ವಿಕಸನದ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ಇಂದಿನ ಮಕ್ಕಳಲ್ಲಿ ಹಿಂಸಾ ಪ್ರವೃತ್ತಿ, ಪೋಷಕರನ್ನು ವಂಚಿಸುವುದು, ವ್ಯಸನಗಳಿಗೆ ದಾಸರಾಗುವುದು ಹೆಚ್ಚಾಗುತ್ತಿದ್ದು, ಕಲಿಕೆಯ ಜೊತೆಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ನಾನು ದೊಡ್ಡ ಆಸ್ತಿಯಾಗಬೇಕು. ಮಾನವೀಯತೆಯ ದಿವ್ಯಜ್ಯೋತಿ ಆಗಬೇಕು ಎಂಬ ವಿಶ್ವಾಸವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಕೇಂದ್ರ ಕಚೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ವೈ.ಶೇಖರ್ ಮಾತನಾಡಿ, ಶಿಕ್ಷಕ ಎಂದರೆ ದೇವರು ಕೊಟ್ಟ ಅಮುಲ್ಯ ಕೊಡುಗೆ. ಒಬ್ಬ ಶಿಕ್ಷಕನು ದೇವರಂತೆ ಏಕೆಂದರೆ ದೇವರು ಇಡೀ ಬ್ರಹ್ಮಾಂಡ ಸೃಷ್ಟಿಕರ್ತನಾಗಿರುತ್ತಾನೆ. ಆದರೆ ಶಿಕ್ಷಕನನ್ನು ಉತ್ತಮ ರಾಷ್ಟ್ರದ ಸೃಷ್ಟಿಕರ್ತ ಎಂದು ಪರಿಗಣಿಸಲಾಗುತ್ತದೆ. ತಮ್ಮ ಬೋಧನೆಯ ಮಾಂತ್ರಿಕತೆಯ ಮೂಲಕ ಸಾಮಾನ್ಯ ಜನರ ಜೀವನ ಶೈಲಿ ಮತ್ತು ಮನಸ್ಸಿನ ಮಟ್ಟವನ್ನು ಹೆಚ್ಚಿಸುವ ಜವಬ್ದಾರಿಯನ್ನು ತೆಗೆದುಕೊಳ್ಳುವ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಶಿಕ್ಷಕ ಸಮಾಜದಲ್ಲಿದ್ದಾರೆ ಎಂದರು.ಆಡಳಿತ ಯೋಜನಾಧಿಕಾರಿ ಲೋಕೇಶ್, ಎಂಐಎಸ್ ಯೋಜನಾಧಿಕಾರಿ ಬಿ.ಮಾಧವ, ಜಿಲ್ಲಾ ವಿಚಕ್ಷಣಾಧಿಕಾರಿಯಾದ ಮಂಜುನಾಥ್, ರಾಜೇಶ್ ಹಾಗೂ ಜ್ಞಾನದೀಪ ಶಿಕ್ಷಕರು ಇದ್ದರು.