ಜೀವನದಲ್ಲಿ ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಜತೆಗೆ ಶಿಕ್ಷಣ ಮುಗಿದ ಮೇಲೆ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು.

ಶಿರಸಿ: ಪೋಷಕರು ಪ್ರತಿದಿನ ಮಕ್ಕಳ ಭವಿಷ್ಯದ ಕಡೆಗೆ ಗಮನ ಹರಿಸುವುದರ ಜತೆಗೆ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಬೇಕು ಮತ್ತು ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳ ನಡುವೆ ಹೋಲಿಕೆ ಮಾಡಬಾರದು. ಮಕ್ಕಳ ಭವಿಷ್ಯಕ್ಕೆ ಶಿಕ್ಷಕರ ಕೊಡುಗೆ ಅತ್ಯಂತ ಶ್ರೇಷ್ಠವಾದದ್ದು ಎಂದು ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಹುಲ್ಲೂರು ಹೇಮಲತಾ ಬಸಪ್ಪ ಅವರು ಅಭಿಪ್ರಾಯಪಟ್ಟರು.ನಗರದ ಪ್ರಸಿದ್ಧ ಮಾರಿಕಾಂಭಾ ದೇವಸ್ಥಾನದ ಸಭಾಭವನದಲ್ಲಿ ದೇವಾಲಯದ ವತಿಯಿಂದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 95ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಜತೆಗೆ ಶಿಕ್ಷಣ ಮುಗಿದ ಮೇಲೆ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು. ಆಧುನಿಕ ಜಗತ್ತಿನಲ್ಲಿ ಎಐ ಬಳಸಿದರೂ ಅತಿಯಾದ ಮೊಬೈಲ್ ಬಳಕೆಯಿಂದ ದೂರ ಇರಬೇಕು ಎಂದರು.ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ ಮಾತನಾಡಿ, ಶಿಕ್ಷಣ ಕಲಿತ ಮಕ್ಕಳು ತಾವು ನಡೆದು ಬಂದ ಹಾದಿಯನ್ನು ಮತ್ತು ಹತ್ತಿದ ಏಣಿಯನ್ನು ಎಂದು ಮರೆಯಬಾರದು. ಮಕ್ಕಳಿಗೆ ಜೀವನದಲ್ಲಿ ನಂಬಿಕೆ ಅತ್ಯಂತ ಮುಖ್ಯ ಎಂದರು.ದೇವಾಲಯದ ಅಧ್ಯಕ್ಷ ರವಿ ಬೆಳ್ಳೇಮನೆ ಮಾತನಾಡಿ, ಮಕ್ಕಳ‌ ಸಾಧನೆಯ ಹಿಂದೆ ಪೋಷಕರ ತ್ಯಾಗ, ಪ್ರೋತ್ಸಾಹ, ಶಿಕ್ಷಕರ ಸಹಕಾರ ಮತ್ತು ಸಮಯ ಪ್ರಜ್ಞೆಯಿಂದ ಮಕ್ಕಳು ಇಷ್ಟೊಂದು ಅಂಕಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ಪ್ರಶಸ್ತಿ ಪಡೆದ ನಂತರ ಸಾಧನೆ ಕುಗ್ಗಬಾರದು. ಇನ್ನಷ್ಟು ಸಮಾಜ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.ವೇದಿಕೆಯಲ್ಲಿ ಒಟ್ಟಾರೆಯಾಗಿ 728 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಪ್ರಿಯಾಂಕ ಚಹ್ವಾಣ, ಅಲ್ತಾಫ್‌ ಹುಸೇನ್ ಸಾಬ್ ಖನಗಾವಿ, ದೇವಸ್ಥಾನದ ಆಡಳಿತ ಆಡಳಿ ಉಪಾಧ್ಯಕ್ಷ ಅಶೋಕ ಪವಾರ್, ಧರ್ಮದರ್ಶಿಗಳಾದ ವಿನಾಯಕ ಶೇಟ್, ಕೇಶವ ಹೆಗಡೆ, ಅರ್ಚನಾ ರಾಘವೇಂದ್ರ ಹೊನ್ನಾವರ, ದೇವಾಲಯದ ವ್ಯವಸ್ಥಾಪಕ ಚಂದ್ರಕಾಂತ ನಾಯ್ಕ್, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.