ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಮಕ್ಕಳನ್ನು ತಿದ್ದಿ ತೀಡಿ ಶಿಕ್ಷಣ ಕಲಿಸಿ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ.
ಭಟ್ಕಳ: ಪಟ್ಟಣದ ಕಮಲಾವತಿ ಮತ್ತು ರಾಮನಾಥ ಶ್ಯಾನಭಾಗ ಸಭಾಗೃಹದಲ್ಲಿ ತಾಲೂಕು ಗುರುವಂದನಾ ಸಮಿತಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ಮಂಜಪ್ಪ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಮಕ್ಕಳನ್ನು ತಿದ್ದಿ ತೀಡಿ ಶಿಕ್ಷಣ ಕಲಿಸಿ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸೋಲು- ಗೆಲುವು ಎರಡರ ಬಗ್ಗೆಯೂ ಕಲಿಸಿ ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರೇರೇಪಿಸುತ್ತಾರೆ. ಯಾವುದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಶಿಕ್ಷಕರ ಪಾತ್ರ ಬಹುದೊಡ್ಡದಾಗಿರುತ್ತದೆ ಎಂದ ಅವರು, ಭಟ್ಕಳದಲ್ಲಿ ಗುರುಭವನ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷದ ಶಿಕ್ಷಕರ ದಿನಾಚರಣೆ ಕಾಯರ್ಯಕ್ರಮವನ್ನು ಹೊಸ ಗುರುಭವನದಲ್ಲಿ ನಡೆಯಲಿದೆ ಎಂದರು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹೊನ್ನಾವರದ ಸೈಂಟ್ ಥೋಮಸ್ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಜೆ. ಖೈರನ್ ಉಪನ್ಯಾಸ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ ಮಾತನಾಡಿರು.
ಅಕ್ಷರ ದಾಸೋಹ ಅಧಿಕಾರಿ ರಾಘವೇಂದ್ರ ಎಂ. ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಮಾಧ್ಯಮಿಕ ಅನುದಾನಿತ ಶಾಲಾ ನೌಕರರ ಸಂಘದ ಉಪಾಧ್ಯಕ್ಷ ಪಿ.ಟಿ. ಚೌಹಾಣ್, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮೆಹಬೂಬಿ ಪಟೇಲ್, ಪ್ರೌಢಶಾಲಾ ಶಿಕ್ಷಕರ ಸಂಘದ ಮಂಜುನಾಥ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಉಲ್ಲಾಸ್ ನಾಯ್ಕ, ಎಂ.ಪಿ. ಗೌಡ, ಧರ್ಮಾ ನಾಯ್ಕ, ಶ್ರೀನಿವಾಸ ನಾಯ್ಕ, ಕೆ.ವಿ. ಪ್ರಭು ಪ್ರತಿಷ್ಠಾನ ಶಿರಾಲಿಯ ರವೀಂದ್ರ ಪ್ರಭು ಇದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣೀಮಾ ಮೊಗೇರ ಅವರನ್ನು ಸೇರಿದಂತೆ ವರ್ಗಾವಣೆಗೊಂಡವರನ್ನು ಗೌರವಿಸಲಾಯಿತು.ಭಟ್ಕಳ ಅರ್ಬನ್ ಬ್ಯಾಂಕ್ ವತಿಯಿಂದ ಇಬ್ಬರು, ಕೆ.ವಿ. ಪ್ರಭು ಪ್ರತಿಷ್ಠಾನದ ವತಿಯಿಂದ ಇಬ್ಬರು, ಸಾಲಗದ್ದೆ ಸ್ಪೋರ್ಟ್ಸ ಕ್ಲಬ್ ವತಿಯಿಂದ ಒಬ್ಬರು ಹಾಗೂ ರಂಜನ್ ಇಂಡೇನ್ ಎಜೆನ್ಸಿ ವತಿಯಿಂದ ಒಬ್ಬರನ್ನು ಉತ್ತಮ ಶಿಕ್ಷಕರೆಂದು ಗುರುತಿಸಿ ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಸ್ವಾಗತಿಸಿದರು. ಶಿಕ್ಷಕ ಎನ್.ಜಿ. ಗೌಡ ಹಾಗೂ ಹೇಮಲತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಶ್ರೀನಿವಾಸ ನಾಯ್ಕ ವಂದಿಸಿದರು.