ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ: ಡಾ.ಮಂತರ್ ಗೌಡ

| Published : Sep 06 2025, 01:01 AM IST

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ: ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ.

ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ವತಿಯಿಂದ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುರುಗಳಿಲ್ಲದಿದ್ದರೆ ಸಮಾಜದ ಸ್ಥಿತಿಗತಿಗಳು ಬೇರಡೆಯೇ ಸಾಗುತ್ತಿತ್ತು, ಗುರುವಿಂದಲೆ ಕೆಡಕುಗಳು ಮರೆಯಾಗಿ ಒಳಿತಾಗುತ್ತಿರುವುದು. ಆದುದರಿಂದಲೇ ಪ್ರತಿಯೊಬ್ಬರ ಜೀವನದಲ್ಲಿಯೂ ಗುರು ಮಹತ್ವ ಪೂರ್ಣವಾಗಿದ್ದಾರೆ ಎಂದು ಗುರುವಿನ ಮಹತ್ವ ವಿವರಿಸಿದರು.

ಬೇಸರದ ಸಂಗತಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಲು ಶಾಲೆಗಳಲ್ಲಿ ಅನೇಕ ಬದಲಾವಣೆ ಹಾಗೂ ನೂತನ ಕಾರ್ಯಕ್ರಮಗಳನ್ನು ತರಲಾಗುತ್ತಿದೆ ಎಂದರು.

ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅದನ್ನು ಸರಿಪಡಿಸಿ ಕೊಡುವುದರ ಭರವಸೆಯನ್ನು ನೀಡಿದರು. ಶಿಕ್ಷಕರುಗಳು ಸಹ ಒಟ್ಟಾಗಿ ಹೋರಾಟ ನಡೆಸಬೇಕು. ತಮಗೆ ದೊರಕಬೇಕಾದ ಪ್ರತಿಯೊಂದು ಸವಲತ್ತು ಪಡೆದುಕೊಳ್ಳಬೇಕು ಹಾಗೆಯೇ ಪ್ರಾಮಾಣಿಕ ಪ್ರಯತ್ನ ನಡೆಸಿ ಬೋಧಿಸಿದ ಶಿಕ್ಷಕರುಗಳಿಗೆ ವಂದಿಸಿ, ಗೌರವಿಸಿದರು.

ನಿವೃತ್ತರಾಗಿರುವ ಶಿಕ್ಷಕರಿಗೆ ಮತ್ತೆ ಪುನಹ ಅವಕಾಶ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಿವೃತ್ತಿ ಹೊಂದಿದವರು ಸಹ ಮತ್ತೆ ಪುನಹ ಅತಿಥಿ ಶಿಕ್ಷಕರಾಗಿ ಬೋಧಿಸಲು ಇಚ್ಛಿಸಿದರೆ ಅವರಿಗೆ ಅವಕಾಶ ಕಲ್ಪಿಸುವುದರ ಕುರಿತು ಅಧಿಕಾರಿಗಳಿಗೆ ಸಲಹೆ ನೀಡಿದರು.

"ಗುರುವಿಂದ ಮುಕ್ತಿ ಸರ್ವಜ್ಞ ":

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮೈಸೂರಿನ ಉಪನ್ಯಾಸಕರಾದ ಎಸ್ ಪಿ ನಾಗರಾಜು ಅವರು ಮಾತನಾಡಿ "ಗುರುವಿಂದ ಬಂಧುಗಳು ಉಪಚರಿಸಬೇಕು, ದೈವಗಳು ಗುರುವಿಂದಲಾದುದು ಪುಣ್ಯ ಲೋಕಕ್ಕೆ, ಗುರುವಿಂದ ಮುಕ್ತಿ ಸರ್ವಜ್ಞ "

ಮೊದಲು ಗುರುವಿನ ಉಪಚಾರವಾದ ನಂತರ ಬಂಧುಗಳನ್ನು ಉಪಚರಿಸಬೇಕು. ಮೊದಲು ಗುರುವನ್ನು ಪೂಜಿಸಿ ಗೌರವಿಸಬೇಕು, ನಂತರ ದೇವರನ್ನು ಪೂಜಿಸಬೇಕು, ಜೊತೆಗೆ ನಮಸ್ಕರಿಸಬೇಕು. ಏಕೆಂದರೆ ಗುರುವಿನಿಂದಲೇ ನಮಗೆ ಪುಣ್ಯ ಲೋಕವು ಪ್ರಾಪ್ತಿಯಾಗುವುದು ಮತ್ತು ಗುರುವಿನಿಂದಲೇ ನಮಗೆ ಮುಕ್ತಿಯು ದೊರೆಯುವುದು ಎಂದರು. ಶಿಕ್ಷಕ, ಚಿಂತಕ, ಬರಹಗಾರ, ಭಾಷಣಕಾರ ಈ ರೀತಿಯಾಗಿ ತಯಾರು ಮಾಡಿದ ನನ್ನ ಶಿಕ್ಷಕರುಗಳಿಗೆ ವಂದಿಸಬೇಕಾದರೆ ನನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಬೇಕು. ಆಗಲೇ ನನ್ನ ಜನ್ಮಕ್ಕೊಂದು ಸಾರ್ಥಕ ಹಾಗೂ ಅರ್ಥ ಸಿಗುವುದು ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಿಳಿಸಿದ್ದರು ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ರವರು ಮಾತನಾಡಿ, ಅತ್ಯುತ್ತಮ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಬೆಳಕು ತೋರಿದ ಹಾಗೆಯೇ ಸಮಯಕ್ಕೆ ಸರಿಯಾಗಿ ಆಗಮಿಸಿ ವಿದ್ಯಾರ್ಥಿಗಳ ಬದುಕಲ್ಲಿ ಜ್ಯೋತಿ ಆಗುವ ಶಿಕ್ಷಕರಿಗೆ ನಮನ ಸಲ್ಲಿಸಿದರು. ಎರಡು ಬಾರಿ ಉಪ ರಾಷ್ಟ್ರಪತಿ ಒಂದು ಬಾರಿ ರಾಷ್ಟ್ರಪತಿ ಹಾಗೂ ಕುಲಪತಿಯಾಗಿ ಇದೆಲ್ಲವುದಕ್ಕಿಂತ ಮಿಗಿಲಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಸ್ಮರಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ನಡೆಸಿದ ಜಿಲ್ಲಾ ಆಡಳಿತ ಹಾಗೂ ಶಾಸಕರಾದ ಮಂತರ್ ಗೌಡ ರವರಿಗೂ ಧನ್ಯವಾದ ಸಲ್ಲಿಸಿದರು.

2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರಾದ ಶಾಲಿನಿ ಕೆ.ಆರ್, ಮೀನಾಕ್ಷಿ ಎ.ಡಿ, ವನಜ ಎಂ, ಜಾನ್ಸಿ ಕೆ.ವಿ, ಯೋಗೇಶ್ ಎಸ್.ಎ, ಅಬ್ದುಲ್ ರಬ್ ಎಮ್.ಎಸ್, ಎ.ಕೆ ಮಾಚಮ್ಮ, ಸುಷಾ ಕೆ, ಎಚ್ ಡಿ ಲೋಕೇಶ್ ಇವರಿಗೆ ಶಾಸಕರಾದ ಮಂತರ್ ಗೌಡ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ನಿವೃತ್ತ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಸ್ವಾಗತಿಸಿದರು. ಮೋಹನ್ ಪೆರಾಜೆ ಹಾಗೂ ಮಂಜುಳಾ ಚಿತ್ರಪುರ ನಿರೂಪಣೆ ನಿರ್ವಹಿಸಿದರು. ಬಿಂದು ವಂದಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾಶಿವಯ್ಯ ಪಲ್ಲೆದ್, ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷರಾದ ಪೂರ್ಣೇಶ್, ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವಕಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ ಮತ್ತಿತರರು ಇದ್ದರು.