ಶಿಕ್ಷಕರ ಸಮಸ್ಯೆ ಹಂಚಿಕೆಗೊಳ್ಳಲು ಗುರು ಸ್ಪಂದನ

| Published : Jul 20 2025, 01:15 AM IST

ಶಿಕ್ಷಕರ ಸಮಸ್ಯೆ ಹಂಚಿಕೆಗೊಳ್ಳಲು ಗುರು ಸ್ಪಂದನ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ಶಾಲಾ ಚಟುವಟಿಕೆ, ಶಾಲಾ ದಾಖಲಾತಿ, ಪಠ್ಯೇತರ ಕಾರ್ಯ, ಇಲಾಖೆಗೆ ಸಲ್ಲಿಸುವಲ್ಲಿ ಅನುಭವಿಸುವ ಸಮಸ್ಯೆಗಳನ್ನು ತಾಲೂಕು ಕಚೇರಿಯಲ್ಲಿ ವೈಯಕ್ತಿಕವಾಗಿ ಹಂಚಿಕೊಳ್ಳಬಹುದು.

ಕುಷ್ಟಗಿ:

ಶಿಕ್ಷಕರ ಸಮಸ್ಯೆ ಹಾಗೂ ಅಭಿಪ್ರಾಯ ಹಂಚಿಕೊಳ್ಳಲು ಗುರು ಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಶಶಿಧರಸ್ವಾಮಿ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಗುರು ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರು ಶಾಲಾ ಚಟುವಟಿಕೆ, ಶಾಲಾ ದಾಖಲಾತಿ, ಪಠ್ಯೇತರ ಕಾರ್ಯ, ಇಲಾಖೆಗೆ ಸಲ್ಲಿಸುವಲ್ಲಿ ಅನುಭವಿಸುವ ಸಮಸ್ಯೆಗಳನ್ನು ತಾಲೂಕು ಕಚೇರಿಯಲ್ಲಿ ವೈಯಕ್ತಿಕವಾಗಿ ಹಂಚಿಕೊಳ್ಳಬಹುದು. ಗುರುಸ್ಪಂದನ ಕಾರ್ಯಕ್ರಮದ ಮೂಲಕ ಶಿಕ್ಷಕರು ಒಟ್ಟಾಗಿ ತಮ್ಮ ಸಮಸ್ಯೆ ಹೇಳುವುದನ್ನು ಕಲ್ಪಿಸಲಾಗಿದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆರೋಗ್ಯ, ಸಂತೋಷ ,ಸಹನೆಯಿಂದ ವಿವಿಧ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ ಮಾತನಾಡಿ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ಸ್ಪಂದಿಸುವಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದವರು. ಇಲಾಖೆಯ ಯಾವುದೇ ಸಮಸ್ಯೆಯನ್ನು ಶಿಕ್ಷಕರ ಸಂಘ ಮನವಿ ಸಲ್ಲಿಸಿದ ಕೂಡಲೇ ಪರಿಹಾರಕ್ಕೆ ಕ್ರಮಕೈಗೊಳ್ಳುವರು. ಪ್ರತಿ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಗೆ ನೀಡುವ ಮಾಹಿತಿ, ದಾಖಲಾತಿ, ದಿನನಿತ್ಯದ ಕಾರ್ಯಗಳ ವರದಿ, ಮಕ್ಕಳ ಶಿಕ್ಷಣದ ಗುಣಮಟ್ಟ, ಹೀಗೆ ಕರ್ತವ್ಯದಲ್ಲಿ ಅನುಭವಿಸುವ ಸಮಸ್ಯೆಗಳು ಸುದೀರ್ಘವಾಗಿ ಉಳಿಯದಂತೆ ಬಗೆಹರಿಸಲು ಇಂತಹ ಗುರು ಸ್ಪಂದನ ಕಾರ್ಯಕ್ರಮ ಆಯೋಜನೆಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಅನುಮತಿ ನೀಡಿದ್ದು ಸಂತೋಷವಾಗಿದೆ. ಆದರೆ, ಹೋಬಳಿ ಮಟ್ಟದ 5 ಕ್ಲಸ್ಟರ್ , 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಶಿಕ್ಷಕರು ಭಾಗವಹಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ಚರ್ಚೆ ಮತ್ತು ಪಾಲ್ಗೊಳ್ಳುವಿಕೆಯಿಂದ ನಮ್ಮ ಕೆಲಸಕ್ಕೆ ಸಹಕಾರ ಸಿಗಲಿದೆ ಎಂದರು.ಈ ವೇಳೆ ಶಾಲಾ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಲ್ಲಪ್ಪ ಕುದರಿ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸೋಮನಗೌಡ ಪಾಟೀಲ್, ಶಿಕ್ಷಣ ಸಂಯೋಜಕ ರಾಘಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ನಾಗಪ್ಪ ಬಿಳಿಯಪ್ಪನವರ ಮಾತನಾಡಿದರು. ನಂತರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಸ್ಯೆಗಳ ಕುರಿತು ಒಂದೊಂದು ವಿಷಯಗಳನ್ನು ಚರ್ಚೆ ನಡೆಸಿದರು.

ಈ ವೇಳೆ ರುದ್ರೇಶ, ಕನಕನಗೌಡ, ಶಿವಶಂಕ್ರಪ್ಪ, ಪ್ರಭಾಕರ ಆವರೆಡ್ಡಿ, ತಾವರಗೇರಾ ಹೋಬಳಿ ವ್ಯಾಪ್ತಿಯ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಶಿಕ್ಷಕರು, ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಶಿಕ್ಷಕಿ ಭಾಗ್ಯಶ್ರೀ ಪ್ರಾರ್ಥಿಸಿದರು. ಕಾಶಿನಾಥ ನಾಗಲಿಕರ ನಿರೂಪಿಸಿದರು.