ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ರಾಜ್ಯ ಸಂಘಟನೆಯ ನಿರ್ದೇಶನದಂತೆ ಬೋಧನೆಗೆ ಯಾವುದೇ ತೊಂದರೆಯಾಗದಂತೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ರಾಜ್ಯ ಸಂಘಟನೆಯ ನಿರ್ದೇಶನದಂತೆ ಬೋಧನೆಗೆ ಯಾವುದೇ ತೊಂದರೆಯಾಗದಂತೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ತಾಲೂಕಿನ ಬಿಸರಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಸಹ ಶಾಲಾ ವೇಳೆಯಲ್ಲಿಯೇ ಪಾಠ ಬೋಧನೆ ನಡೆಸುತ್ತಾ, ಕಪ್ಪುಪಟ್ಟಿ ಧರಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವ ಆದೇಶವನ್ನು ತಕ್ಷಣ ರದ್ದುಪಡಿಸಬೇಕು. ಶಿಕ್ಷಕರಿಗೆ ಸಂಪೂರ್ಣ ಸೇವಾ ಭದ್ರತೆ ಒದಗಿಸಬೇಕು ಹಾಗೂ ಶಿಕ್ಷಕರ ಭವಿಷ್ಯಕ್ಕೆ ಮಾರಕವಾಗಿರುವ ಎನ್‌ಪಿಎಸ್ ವ್ಯವಸ್ಥೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯಾದ ಒಪಿಎಸ್ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಬುಡ್ಡನ್ ಗೌಡ ಮಾತನಾಡಿ, ಸೇವೆ ಮಾಡುತ್ತಿರುವ ಶಿಕ್ಷಕರಿಗೆ ಮತ್ತೆ ಟಿಇಟಿ ಕಡ್ಡಾಯಗೊಳಿಸುವುದು ಅನ್ಯಾಯವಾಗಿದೆ. ಇದು ಶಿಕ್ಷಕರ ಸೇವಾ ಭದ್ರತೆಗೆ ಧಕ್ಕೆ ತರುವ ಕ್ರಮವಾಗಿದೆ. ಆದೇಶವನ್ನು ಹಿಂಪಡೆಯಬೇಕು ಎಂದು ಹೇಳಿದರು.ಹನುಮಂತಪ್ಪ ಕುರಿ ಮಾತನಾಡಿ, ಶಿಕ್ಷಕರು ನಿವೃತ್ತಿಯ ನಂತರ ಗೌರವಯುತ ಜೀವನ ನಡೆಸಲು ಒಪಿಎಸ್ ಅತ್ಯವಶ್ಯ. ಮಾರಕ ಎನ್‌ಪಿಎಸ್ ವ್ಯವಸ್ಥೆಯನ್ನು ರದ್ದುಪಡಿಸಿ ಶಿಕ್ಷಕರ ಭವಿಷ್ಯ ಭದ್ರಗೊಳಿಸುವ ಒಪಿಎಸ್ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ನಡೆದ ಈ ಕಪ್ಪು ಪಟ್ಟಿ ಪ್ರತಿಭಟನೆಗೆ ಶಿಕ್ಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸರ್ಕಾರ ಶಿಕ್ಷಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂಬ ಆಶಯವನ್ನು ಶಿಕ್ಷಕರು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ವೀರಣ್ಣ ಹಮ್ಮಿಗಿ, ಬಾಬು ರೆಡ್ಡಿ, ಮಂಜುನಾಥ್ ಅರ್ಕಸಾಲಿ ಹಾಜರಿದ್ದರು.